ಬೆಂಗಳೂರು:– ನಿಮ್ಹಾನ್ಸ್ನಲ್ಲಿ ಮಗು ಸಾವು ಘಟನೆ ಸಂಬಂಧ ವರದಿ ಕೇಳಿದ್ದು, ಬಳಿಕ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಿಮ್ಹಾನ್ಸ್ನಲ್ಲಿ ಹಾಸನ ಮೂಲದ ಮಗು ಸಾವು ಮತ್ತು ಪ್ರತಿಭಟನೆ ವಿಚಾರವಾಗಿ ವರದಿ ಕೇಳಿದ್ದೇನೆ. ಅಧಿಕಾರಿಗಳು ವರದಿ ಕೊಟ್ಟ ನಂತರ ಮುಂದೇನು ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ನಮ್ಮ ಕಡೆಯಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಅಂತ ವೈದ್ಯರು ಹೇಳಿದ್ದಾರೆ. ಎರಡೂ ಕಡೆಯವರ ಜೊತೆ ಮಾತನಾಡುತ್ತೇವೆ. ಲೋಪಗಳು ಆಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಹಾನ್ಸ್ ಮೇಲೆ ಬಹಳ ಒತ್ತಡ ಇದೆ. ಸಾಕಷ್ಟು ರೋಗಿಗಳು ರಾಜ್ಯಾದ್ಯಂತ ಬರುತ್ತಾರೆ. ಕೆಲವೊಮ್ಮೆ ಬೆಡ್ಗಳು ಸಿಗಲ್ಲ. ನಾನೂ ಕೆಲವೊಮ್ಮೆ ಪ್ರಯತ್ನ ಪಟ್ಟಾಗ ಬೆಡ್ ಸಿಕ್ಕಿಲ್ಲ. ಇದಕ್ಕೆ ಏನದರೂ ಪರ್ಯಾಯ ವ್ಯವಸ್ಥೆ ಕುರಿತು ಚರ್ಚೆ ಮಾಡುತ್ತೇವೆ ಎಂದರು.
ಆರೋಗ್ಯ ಕವಚ ಸೇವೆ ಗುಣಮಟ್ಟದ ವೃದ್ಧಿಯಲ್ಲಿ ಕುಂಠಿತವಾಗಿರೋದು ನಿಜ. ಈ ಸೇವೆಯಲ್ಲಿ ಸಾಕಷ್ಟು ಕುಂದುಕೊರತೆಗಳಿವೆ. ಲೋಪದೋಷಗಳನ್ನು ಸರಿಪಡಿಸಲು ಆರೋಗ್ಯ ಇಲಾಖೆ ಕಟಿಬದ್ಧವಾಗಿದೆ. 262 ಹೊಸ ಆಂಬ್ಯುಲೆನ್ಸ್ ಆರೋಗ್ಯ ಕವಚ ಸೇವೆಗೆ ಒದಗಿಸಿ ನಾವು ಸುಮ್ಮನಾಗಲ್ಲ. ಇವುಗಳ ನಿರ್ವಹಣೆಯತ್ತ ಹೆಚ್ಚು ಗಮನ ಹರಿಸಲಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಅಲ್ಲದೇ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವನ್ನು ಬೇರೆ ರಾಜ್ಯಗಳಲ್ಲಿರುವ ಉತ್ತಮ ಮಾದರಿಗಳ ಅಧ್ಯಯನಕ್ಕೆ ಕಳಿಸಲಾಗಿದೆ. ಹಿರಿಯ ಅಧಿಕಾರಿಗಳ ತಂಡ ಹಾಗೂ ತಾಂತ್ರಿಕ ಸಲಹಾ ಸಮಿತಿ ನೀಡುವ ವರದಿ ಆಧರಿಸಿ 108 ಆಂಬ್ಯುಲೆನ್ಸ್ ಆರೋಗ್ಯ ಸೇವೆಯಲ್ಲಿ ಸುಧಾರಣೆಗಳನ್ನು ಜಾರಿಗೆ ತರಲಿದ್ದೇವೆ ಎಂದರು.