ಇಂಗ್ಲೆಂಡ್ ಮಣಿಸಿ ಸೆಮಿಫೈನಲ್ಗೆ ದಕ್ಷಿಣ ಆಫ್ರಿಕಾ ಲಗ್ಗೆಯಿಟ್ಟಿದೆ. ಕರಾಚಿಯ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ಆಫ್ರಿಕಾ ಶಿಸ್ತಿನ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಬ್ಯಾಟರ್ ಗಳು ಮತ್ತೊಮ್ಮೆ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾದರು. 38.2 ಓವರ್ ಗಳಲ್ಲಿ 179 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಜೋ ರೂಟ್ 37 ರನ್ ಗಳಿಸಿದರೆ, ಜೋಫ್ರಾ ಆರ್ಚರ್ 25 ರನ್ ಗಳಿಸಿದರು. ಬೆನ್ ಡಕೆಟ್ 24 ರನ್, ಜೋಸ್ ಬಟ್ಲರ್ 21 ರನ್ ಗಳಿಸಿದರು. ಮಾರ್ಕೊ ಯಾನ್ಸೆನ್ ಮತ್ತು ಮುಲ್ಡರ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಕೇಶವ್ ಮಹಾರಾಜ್ 2 ವಿಕೆಟ್ ಪಡೆದರೆ, ಲುಂಗಿ ಎಂಗಿಡಿ ಮತ್ತು ಕಗಿಸೋ ರಬಾಡ ತಲಾ 1 ವಿಕೆಟ್ ಪಡೆದರು.
180 ರನ್ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 29.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 181 ರನ್ ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ರಾಸಿ ವ್ಯಾನ್ ಡೆರ್ ಡುಸೆನ್ ಅಜೇಯ 72 ರನ್ ಗಳಿಸಿದರೆ, ಹೆನ್ರಿಚ್ ಕ್ಲಾಸೆನ್ 64 ರನ್ ಗಳಿಸಿ ದಕ್ಷಿಣ ಆಫ್ರಿಕಾಗೆ ಸುಲಭ ಗೆಲುವು ತಂದುಕೊಟ್ಟರು. ಜೋಸ್ ಬಟ್ಲರ್ ನಾಯಕತ್ವದ ಕೊನೆ ಪಂದ್ಯದಲ್ಲೂ ಇಂಗ್ಲೆಂಡ್ ಹೀನಾಯ ಸೋಲನುಭವಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಅಂತ್ಯಗೊಳಿಸಿತು.