ಹಾವೇರಿ: ಹಾವೇರಿ ನಗರಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಿತು. ಕಾಂಗ್ರೆಸ್ (Congress) ಬಹುಮತ ಇದ್ದರೂ, 6 ಕಾಂಗ್ರೆಸ್ ಸದಸ್ಯರು ಗೈರಾಗಿದ್ದು ಬಿಜೆಪಿ (BJP) ಬೆಂಬಲಿತ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಹಾವೇರಿ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಶಶಿಕಲಾ ರಾಮು ಮಾಳಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸಾತೇನಹಳ್ಳಿ ಕೈ ಎತ್ತುವ ಮೂಲಕ ಬಹುಮತದ ಆಧಾರದ ಮೇಲೆ ಚುನಾಯಿತರಾದರು. ಮತದಾನದ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಪಟಾಕಿ ಸಿಡಿಸಿ, ಶಿಳ್ಳೆ, ಕೇಕೇಗಳೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು
ಈ ಎರಡೂ ಸ್ಥಾನಗಳಿಗೆ ಇತ್ತೀಚೆಗೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸರ್ಕಾರ ಮೀಸಲಾತಿ ನಿಗದಿ ಮಾಡಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಪಕ್ಷೇತರರೇ ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ಹಿಡಿದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ `ಬಿ’ವರ್ಗಕ್ಕೆ ಮೀಸಲಾಗಿತ್ತು.
ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಬೆಂಬಲಿತ 13 ಜನ, ಬಿಜೆಪಿ ಬೆಂಬಲಿತ 9 ಜನ ಮತ್ತು ಪಕ್ಷೇತರರು 6 ಸ್ಥಾನಗಳಲ್ಲಿ ಗೆಲುವು ಕಂಡಿದ್ದರು. ಸಂಸದ, ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರ ಮತಗಳು ಸೇರಿ ಒಟ್ಟು 34 ಮತಗಳಿದ್ದವು. ಈ ಪೈಕಿ ಶಾಸಕ ರುದ್ರಪ್ಪ ಲಮಾಣಿ ಮತ್ತು ಎಂಎಲ್ಸಿ ಸಲೀಂ ಅಹ್ಮದ್ ಕಾಂಗ್ರೆಸ್ನವರಾದರೆ, ಸಂಸದ ಬಸವರಾಜ ಬೊಮ್ಮಾಯಿ ಕಮಲ ಪಕ್ಷದವರು