ಬೆಂಗಳೂರು :– ಡಿಕೆಶಿ ಪ್ರಾಮಾಣಿಕರಾಗಿದ್ದರೆ ಸಂಪುಟ ನಿರ್ಧಾರ ವಿರೋಧಿಸಬೇಕಿತ್ತು ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜವಾಬ್ದಾರಿಯ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಪ್ರಾಮಾಣಿಕವಾಗಿದ್ದರೆ ಸಚಿವ ಸಂಪುಟ ಕೈಗೊಂಡ ತೀರ್ಮಾವನ್ನು ವಿರೋಧಿಸಬೇಕಿತ್ತು. ವಿರೋಧಿಸದೆ ಇರುವುದರಿಂದ ಶಿವಕುಮಾರ್ ತಪ್ಪು ಮಾಡಿದ್ದಾರೆ ಎಂಬುದಾಗಿ ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಪ್ರಕರಣದ ಅನುಮತಿಯನ್ನು ವಾಪಸ್ ತೆಗೆದುಕೊಂಡಿರುವ ಸರ್ಕಾರದ ತೀರ್ಮಾನವು ಸಂಪೂರ್ಣ ಕಾನೂನು ಬಾಹಿರ. ಅವರಿಗೆ ಕಾನೂನಿನ ಭಯ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದರು.
ಸರ್ಕಾರ ಕೈಗೊಂಡ ತೀರ್ಮಾನದ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕು ಎಂಬುದನ್ನು ಚರ್ಚಿಸಿ ನಿರ್ಧರಿಸಲಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡ ತೀರ್ಮಾನ ರಾಜಕೀಯ ಪ್ರೇರಿತ ಆಗಿರಲಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಆಗಿದೆ ಎನ್ನುವ ಮಾಹಿತಿ ಆಧಾರದಲ್ಲಿ ಹಿಂದೆ ಸಿಬಿಐಗೆ ತನಿಖೆಗೆ ಅನುಮತಿ ನೀಡಲಾಗಿತ್ತು. ಸರ್ಕಾರದ ನಿರ್ಧಾರ ದುರದೃಷ್ಟಕರ. ಸರ್ಕಾರ ಕಾನೂನಿಗೆ ವಿರುದ್ಧವಾಗಿ ಈ ನಿರ್ಣಯ ಕೈಗೊಂಡಿದೆ. ಡಿ.ಕೆ.ಶಿವಕುಮಾರ್ ಅವರನ್ನು ಉಳಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.