ಬೆಂಗಳೂರು:- ನಗರದಲ್ಲಿ ಪರ್ಫ್ಯೂಮ್ ಗೋಡೌನ್ನಲ್ಲಿ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೇ ಇಬ್ಬರು ಗಾಯಾಳು ಬಾಲಕರು ಸಾವನ್ನಪ್ಪಿದ್ದಾರೆ. ರಿಯಾನ್ ಪಾಷಾ (10) ಮತ್ತು ಸಾಜಿದ್ (15) ಮೃತ ದುರ್ದೈವಿಗಳು
ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿರುವ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿತ್ತು. ಗಾಯಗೊಂಡ ಐವರ ಪೈಕಿ 10 ಮತ್ತು 15 ವರ್ಷದ ಬಾಲಕರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಯಾನ್ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ, ಸಾಜಿದ್ ಮೃತಟ್ಟಿದ್ದನು. ಆ ಮೂಲಕ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ರಿಯಾನ್ ತಂದೆ ಅಫ್ರೋಜ್ ಪರ್ಫ್ಯೂಮ್ ಗೋಡೌನ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಊಟ ಕೊಡಲೆಂದು ರಿಯಾನ್ ಮತ್ತು ಸಂಬಂಧಿ ಸಾಜಿದ್ ಇಬ್ಬರೂ ಫ್ಯಾಕ್ಟರಿಗೆ ಬಂದಿದ್ದರು. ಈ ವೇಳೆ ನಡೆದ ಅಗ್ನಿ ಅವಘಡದಲ್ಲಿ ರಿಯಾನ್, ಸಾಜಿದ್ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ, ಉಳಿದ ಮೂವರ ಸ್ಥಿತಿ ಕೂಡ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.