ಬೆಂಗಳೂರು: ರಾಜ್ಯದಲ್ಲಿ 100 ಹೈಟೆಕ್ ಹಾರ್ವೆಸ್ಟ್ ಹಬ್ ಸ್ಥಾಪನೆ ಹಾಗೂ 200 ಕೋಟಿ ರೂ ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ನೀಡಿದ್ದು ಶೀಘ್ರ ಅನುಷ್ಠಾನ ಗೊಳಿಸಲಾಗುವುದು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವರ ಮಲ್ಲನಾಯಕನಹಳ್ಳಿಯಲ್ಲಿ ನಡೆದ ಜಲಾನಯನ ಮೇಳ ಹಾಗೂ ಫಲಾನುಭವಿಗಳಿಗೆ ಬೃಹತ್ ಪ್ರಮಾಣದಲ್ಲಿ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 223 ತಾಲ್ಲೂಕಿನಲ್ಲಿ ಬರ ಇದೆ .17000 ಕೋಟಿ ರೂ ಪರಿಹಾರ ಕೋರಿದ್ದೇವೆ . ಕೇಂದ್ರದಿಂದ ಈ ವರೆಗೂ ಯಾವುದೇ ನೆರವು ,ಪೂರಕ ಸ್ಪಂದನೆ ದೊರೆತಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.
ರಾಜ್ಯ ಸರ್ಕಾರ ರೈತರ ಪರ 1500 ಕೋಟಿ ವಿಮೆ ಹಣ ಪಾವತಿ ಮಾಡಿದೆ.230 ಕೋಟಿ ವಿಮೆ ರೈತರಿಗೆ ಈಗಾಗಲೇ ಪಾವತಿಯಾಗಿದೆ ಎಂದು ಅವರು ಮಾಹಿತಿ ನೀಡಿದರು
ರಾಜ್ಯ ಸರ್ಕಾರ ಜನಪರ ಯೋಜನೆ ಅನುಷ್ಠಾನ ಮಾಡುತ್ತಿದೆ.ಅಧಿಕಾರಕ್ಕೆ ಬಂದ ಕೂಡಲೆ ನಾಲ್ಕು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ .ನುಡಿದಂತೆ ನಡೆದಿದ್ದೇವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆ ಪ್ರಭುಗಳು.ಚುನಾವಣೆಗಳಲ್ಲಿ ಯೋಗ್ಯರನ್ನು ಆಯ್ಕೆ ಮಾಡಬೇಕು ಆ ಅಧಿಕಾರ ಜನರ ಕೈಯಲ್ಲಿ ಇದೆ .ಅದನ್ನು ಸರಿಯಾಗಿ ಬಳಸಿ ಎಂದು ಸಚಿವರು ಹೇಳಿದರು.
ಅವಕಾಶ ಸಿಕ್ಕಾಗ ಜನರಿಗೆ ಸಹಾಯ ಮಾಡಬೇಕು. ನೀವು ನೀಡಿದ ಜವಾಬ್ದಾರಿ ಮುತುವರ್ಜಿಯಿಂದ ನಿರ್ವಹಣೆ ಮಾಡುತ್ತಿರುವೆ ಎಂದರು.
ರಾಜ್ಯಾದ್ಯಂತ ಸಂಪೂರ್ಣ ಮಳೆಯಾಶ್ರಿತ ಪ್ರದೇಶದಲ್ಲಿ ಜಲಾನಯನ ಇಲಾಖೆ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಹಲವು ನೆರವು ನೀಡಲಾಗುತ್ತಿದೆ. ಸೌಲಭ್ಯ ವಿತರಿಸಲಾಗುತ್ತಿದೆ ಎಂದರು.
ದೇವಲಾಪುರ ಹಾಗೂ ದಣೆವರ ಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 17 ಗ್ರಾಮಗಳ 1689 ರೈತರಿಗೆ
ಶೇ 80 ಪ್ರತಿಶತ ಸಬ್ಸಿಡಿಯೊಂದಿಗೆ
2 ಕೋಟಿಗೂ ಅಧಿಕ ಸಹಾಯಧನದಲ್ಲಿ ಜೀವನೋಪಾಯ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.
ರಾಜ್ಯದ
ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆಗಳು ಜಾರಿಯಾಗಲಿವೆ ಎಂದು ಕೃಷಿ ಸಚಿವರು ತಿಳಿಸಿದರು.
ಹೇಮಾವತಿ ಜಲಾಶಯದಿಂದ ಮಂಡ್ಯ ಜಿಲ್ಲೆಗೆ ನೀರು ಹರಿಸುವ ನಾಲೆಗಳ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯದಲ್ಲಿ 13000 ಶಿಕ್ಷಕರ ನೇಮಕಾತಿ ಮಾಡಲಾಗುವುದು ವಿವಿಧ ಇಲಾಖೆಗಳ ಖಾಲಿ ಹುದ್ದೆ ಭರ್ತಿಗೂ ಕ್ರಮವಹಿದಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ ಅವರು ಮಾತನಾಡಿ
ರೈತರಿಗೆ ವಿವಿಧ ಮೇಳ ಆಯೋಜಿಸಿ ಸರ್ಕಾರದ ವಿವಿಧ ಸವಲತ್ತುಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೇ ಒದಗಿಸಿತ್ತಿರುವುದು ಸ್ವಾಗತಾರ್ಹ. ಇಂತಹ ಮೇಳೆಗಳು ರಾಜ್ಯಾದ್ಯಂತ ಹೆಚ್ಚು ನಡೆಯಬೇಕು ಎಂದರು.
ರೈತರು ಸದಾ ದೇಶದ ಶಕ್ತಿ. ಹಳ್ಳಿಗಳು ಹಾಗೂ ಕೃಷಿಕರು ಉಳಿದರೆ ಮಾತ್ರ ದೇಶ ಉಳಿದು, ಆರ್ಥಿಕತೆ ಹೆಚ್ಚುತ್ತದೆ.
ರೈತರು ಕೃಷಿ ನಡೆಸಿದ ಸಂದರ್ಭದಲ್ಲಿ ತಾವು ಬೆಳೆದ ಬೆಳೆಯನ್ನು ತಕ್ಷಣ ಮಾರಾಟ ಮಾಡಿದರೆ ಲಾಭ ಕಡಿಮೆ ಅದರ ಬದಲಾಗಿ ಸೆಕೆಂಡರಿ ಕೃಷಿ ಅಳವಡಿಸಿಕೊಂಡು ಕೆಲವು ದಿನ ಸಂರಕ್ಷಿಸಿ ಮಾರಾಟ ಮಾಡಿದರೇ ಲಾಭ ಹೆಚ್ಚು ಎಂದರು.
ಸೆಕೆಂಡರಿ ಕೃಷಿ ಅಳವಡಿಸಿಕೊಳ್ಳಲು ಕೃಷಿ ಯಂತ್ರೋಪಕರಣ ಬೇಕಾಗುತ್ತದೆ. ಕೃಷಿ ಅಧಿಕಾರಿಗಳು ಕೃಷಿ ಯಂತ್ರೋಪಕರಣಗಳನ್ನು ಪ್ರಾತ್ಯಕ್ಷಿಕೆ ಮಾಡಿ ರೈತರಿಗೆ ಪರಿಚಯಿಸಿಕೊಡಬೇಕು ಎಂದು ಸಲಹೆ ನೀಡಿದರು.
ಆಧುನಿಕ ತಂತ್ರಜ್ಞಾನದ ಅಳವಡಿಕೆ ವೈಜ್ಞಾನಿಕ ಬೇಸಾಯದಿಂದ ರೈತರು ಸರ್ಕಾರಿ ಅಧಿಕಾರಿಗಳಿಗಿಂತ ರೈತರು ಹೆಚ್ಚು ಹಣ ಸಂಪಾದಿಸಬಹುದು.ಯುವ ಸಮುದಾಯ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಪದ್ಧತಿಯಲ್ಲಿ ಕಡಿಮೆ ಶ್ರಮದಲ್ಲಿ ಹೆಚ್ಚು ಇಳುವರಿ ಪಡೆಯುವ ಸಂಶೋಧನೆ ನಡೆಸಿ ರೈತರಿಗೆ ಪರಿಚಯಿಸಬೇಕು. ಆಗ ಹೊಸ ತಂತ್ರಜ್ಞಾನಗಳು ಯುವ ಸಮುದಾಯವನ್ನು ಗ್ರಾಮೀಣ ಪ್ರದೇಶದಲ್ಲೇ ಉಳಿದು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಜಿಲ್ಲಾಧಿಕಾರಿ ಡಾ:ಕುಮಾರ ಅವರು ಮಾತನಾಡಿ ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಸಮಾಜದಲ್ಲಿ ರೈತರಿಗೆ ವಿಶೇಷ ಗೌರವವಿದೆ.ರೈತರಿಗೆ ಬೇಕಿರುವುದು ಉತ್ತೇಜನೆ ಹಾಗೂ ಅವಕಾಶ ಅನುಕಂಪವಲ್ಲ. ರೈತರು ಸರ್ಕಾರದಿಂದ ನೀಡಲಾಗುವ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪಿ.ಎಮ್.ಎಫ್. ಎಂ.ಇ ಯೋಜನೆಯಡಿ ರೈತರಿಗೆ ಹೆಚ್ಚು ಸಹಾಯಧನ ಒದಗಿಸಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.ಜಿಲ್ಲೆಯ ಏಳು ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ ಬರ ಪರಿಹಾರ ನೀಡಲಿದೆ. ಇದಕ್ಕೆ ರೈತರು ಫ್ರೂಟ್ಸ್ ಐ.ಡಿ ಯಲ್ಲಿ ಹೆಸರು ನೊಮದಾಯಿಸಿಕೊಂಡು ತಮ್ಮ ಜಮೀನಿಗೆ ಸಂಬಂಧಿಸಿದ ವಿವರ ಅಪ್ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ರೈತರು ತಪ್ಪದೇ ಜಮೀನಿನ ವಿವರವನ್ನು ಫ್ರೂಟ್ಸ್ ಐ.ಡಿ ಯಲ್ಲಿ ಅಪ್ಲೋಡ್ ಮಾಡಿ.
ರೈತರು ಬೆಳೆದ ಭತ್ತ ಮತ್ತು ರಾಗಿಯನ್ನು ಬೆಂಬಲ ಯೋಜನೆಯಡಿ ಖರೀದಿಸಲು ನೊಂದಣಿ ಕೇಂದ್ರ ಖರೀದಿ ಕೇಂದ್ರ ತೆರೆಯಲಾಗಿದೆ ಸದುಪಯೋಗ ಪಡಿಸಿಕೊಳ್ಳಿ ಎಂದರು.
* 1689 ರೈತರಿಗೆ 2 ಕೋಟಿ ಸಹಾಯಧನದ ಸಲಕರಣೆ ವಿತರಣೆ*
ಜಲಾನಯನವ ಕಾರ್ಯಕ್ರಮದಲ್ಲಿ ರೈತರ ಜೀವನೋಪಾಯ ಚಟುವಟಿಕೆ, ಉತ್ಪದನಾ ಪದ್ಧತಿ ಹಾಗೂ ಖುಷ್ಕಿ ತೋಟಗಾರಿಕೆ ಘಟಕದಡಿ ಪಲ್ವರೈಸರ್ (ಹಿಟ್ಟಿನ ಗಿರಣಿ), ಎಣ್ಣೆ ಗಾಣ, ಹಪ್ಪಳ ಮಾಡುವ ಯಂತ್ರ, ನಾಟಿ ಕೋಳಿ, ಪೈಬರ್ ದೋಟಿ, ಲ್ಯಾಡರ್, ಹಾಗೂ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ದೇವಲಾಪುರ ಹೋಬಳಿಯ ವ್ಯಾಪ್ತಿಯ
ರೈತರಿಗೆ ನೀಡಲಾಯಿತು.
153 ಜನರಿಗೆ 1 ಹೆಚ್ ಪಿ ಹಿಟ್ಟಿನ ಗಿರಣಿ, 40 ಜನರಿಗೆ 2 ಹೆಚ್ ಪಿ ಹಿಟ್ಟಿನ ಗಿರಣಿ, 10 ಜನರಿಗೆ 3 ಹೆಚ್ ಪಿ ಹಿಟ್ಟಿನ ಗಿರಣಿ, 20 ಜನರಿಗೆ 0.5 ಹೆಚ್ಪಿ ಎಣ್ಣೆ ಗಾಣ,8 ಜನರಿಗೆ ಹಪ್ಪಳ ಮಾಡುವ ಯಂತ್ರ,288 ರೈತರಿಗೆ ಹಸಿರೆಲೆ ಗೊಬ್ಬರದ ಬೀಜ, 60 ಜನರಿಗೆ ಲಘು ನೀರಾವರಿ ಘಟಕ, 70 ರೈತರಿಗೆ ಜೇನು ಪೆಟ್ಟಿಗೆ, 116 ರೈತರಿಗೆ ಮೇವು ಕತ್ತರಿಸುವ ಯಂತ್ರ,50 ರೈತರಿಗೆ ಫೈಬರ್ ದೋಟಿ, 160 ರೈತರಿಗೆ ಹಿತ್ತಲ ಕೋಳಿ ಸಾಕಾಣಿಕೆ, 20 ರೈತರಿಗೆ ತೆಂಗಿನ ಮರ ಹತ್ತುವ ಯಂತ್ರ, ಜಲಾನಯನ ಯೋಜನೆಯಡಿ ರಚಿತವಾಗಿರುವ 35 ಸ್ವಸಹಾಯ ಗುಂಪುಗಳಿಗೆ ಪ್ರತಿ ಸಂಘಕ್ಕೆ 50 ಸಾವಿರ ರೂ ಸಹಾಯಧನ ಹಾಗೂ 900 ರೈತರಿಗೆ ಪೌಷ್ಟಿಕ ಕೈ ತೋಟಕ್ಕೆ ಸಹಾಯಧನ ಒಟ್ಟಾರೆ 1629 ರೈತರಿಗೆ 2 ಕೋಟಿ ರೂ ಸಹಾಯಧನ ಪಾರದರ್ಶಕವಾಗಿ ವಿತರಿಸಿದ್ದು ವಿಶೇಷವಾಗಿತ್ತು.
9.10 ಕೋಟಿ ಯೋಜನಾ ಮೊತ್ತದಲ್ಲಿ ಜಲಾನಯನ ಯೋಜನೆ ಅನುಮೋದನೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ ಘಟಕ-2.0 ಯೋಜನೆಯಡಿ ನಾಗಮಂಗಲ ತಾಲ್ಲೂಕಿನ ದೇವಲಾಪುರ ಹಾಗೂ ದೇವರಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 17 ಗ್ರಾಮಗಳ 4138 ಹೆಕ್ಟೇರ್ ವಿಸ್ತೀರ್ಣ ದಲ್ಲಿ ರೂ 910.43 ಲಕ್ಷ ಯೋಜನಾ ಮೊತ್ತದಲ್ಲಿ ಜಲಾನಯನ ಯೋಜನೆ ಅನುಮೋದನೆಯಾಗಿರುತ್ತದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್,ಜಲಾನಯನ ಇಲಾಖೆ ಆಯುಕ್ತರಾದ ಗಿರೀಶ್, ನಿರ್ದೇಶಕರಾದ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು..