ಬೆಂಗಳೂರು:- ಅಸ್ತಿತ್ವ ಕಳೆದುಕೊಂಡಿರುವ ಬಿಜೆಪಿಗೆ ಜೀವ ತುಂಬುವ ಶಕ್ತಿ ಕೊಡಲಿ ಎಂದು ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯಾಧ್ಯಕ್ಷನಾಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡುವ ಮೂಲಕ ಹೈಕಮಾಂಡ್ ಸಂತೋಷ್ ಅವರಿಗೆ ನೀವು ಕೇಶವ ಕೃಪಾದಲ್ಲೇ ಇರಿ ಎಂದು ಸ್ಪಷ್ಟ ಸಂದೇಶ ಕಳುಹಿಸಿದೆ ಎಂದು ಟೀಕಿಸಿದ್ದಾರೆ.
ಬಿ.ವೈ ವಿಜಯೇಂದ್ರ ನೇಮಕ ಮೂಲಕ ‘ಬಿ.ಎಲ್. ಸಂತೋಷ್ ನಿಮ್ಮ ತಂತ್ರಗಾರಿಕೆ ನಮಗೆ ಸಂತೋಷ ಆಗಿಲ್ಲ. ಯಡಿಯೂರಪ್ಪ ಅವರ ಪುತ್ರನಿಗೆ ಪ್ರಮುಖ ಸ್ಥಾನ ಕೊಡುತ್ತಿದ್ದೇವೆ. ನೀವು ಕೇಶವ ಕೃಪಾದಲ್ಲಿ ಇರಿ ಎಂದು ವರಿಷ್ಠರು ಸಂದೇಶ ಕೊಟ್ಟಂತಿದೆ ಎಂದು ಟಾಂಗ್ ನೀಡಿದರು. ಬಳಿಕ ವೈಯಕ್ತಿಕವಾಗಿ ನಾನು ಟೀಕೆ ಮಾಡಲ್ಲ. ವಿಜಯೇಂದ್ರ ನನಗಿಂತ 4-5 ವರ್ಷ ದೊಡ್ಡವರು. ಅವರಿಗೆ ಒಳ್ಳೆಯದಾಗಲಿ. ಬಿಜೆಪಿ ಇಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಅದಕ್ಕೆ ಜೀವ ತುಂಬುವ ಶಕ್ತಿ ಕೊಡಲಿ ಎಂದರು.
ಮುಂದುವರೆದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ.ಸೋಮಣ್ಣ, ಸಿ.ಟಿ.ರವಿ ರಾಜ್ಯಾಧ್ಯಕ್ಷ ಪ್ರಯತ್ನಿಸಿದ್ದರು. ಪ್ರಧಾನಿ ಮೋದಿ ಅವರು, ಕುಟುಂಬ ರಾಜಕಾರಣ ತೊಲಗಿಸಬೇಕು, ಓಲೈಕೆ ರಾಜಕಾರಣ, ಭ್ರಷ್ಟಾಚಾರ ನಾವು ಒಪ್ಪಲ್ಲ ಎಂದು ಕೆಂಪು ಕೋಟೆ ಮೇಲೆ ನಿಂತು ಭಾಷಣ ಮಾಡುತ್ತಿದ್ದರು. ಆದರೆ, ಈಗ ವಿಜಯೇಂದ್ರ ಆಯ್ಕೆಗೆ ಏನನ್ನಬೇಕು?. ಭ್ರಷ್ಟಾಚಾರ ತೆಗೆದುಹಾಕುತ್ತೇವೆ ಎಂದು ಬಿಎಸ್ವೈ ಅವರನ್ನು ಕಣ್ಣೀರು ಹಾಕಿಸಿ ಕೆಳಗಿಳಿಸಿದರು. ನಾನು ಏನೇ ಮಾಡಿದರು ಖರ್ಗೆ ಮಗ ಅನ್ನುತ್ತಾರೆ. ನಾನು ಯೂತ್ ಕಾಂಗ್ರೆಸ್ನಲ್ಲಿ ಕೆಲಸ ಮಾಡಿ ಶಾಸಕನಾದೆ. ಅದನ್ನು ಯಾರೂ ಹೇಳಲ್ಲ. ಆದರೂ ನಮ್ಮನ್ನು ಕುಟುಂಬ ರಾಜಕಾರಣ ಅಂದರು. ಆದರೆ ಈಗ ಯಡಿಯೂರಪ್ಪ ಅವರ ಮಗನಿಗೆ ಸ್ಥಾನ ನೀಡಿದ್ದಾರೆ. ಈಗ ಮೋದಿ, ಶಾ ಮಾತು ಏನಾಯಿತು. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಗುಡುಗಿದರು.