ಬೀದರ್ (ಜ.10): ರಾಷ್ಟ್ರದೆಲ್ಲಡೆ ಆರಂಭವಾಗಿರುವ ಬೂಸ್ಟರ್ ಡೋಸ್ ಲಸಿಕಾಭಿಯಾನಕ್ಕೆ ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಮನ್ನಾಎಖೇಳ್ಳಿ ಗ್ರಾಮದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸೋಮವಾರ ಚಾಲನೆ ನೀಡಿದರು. ಮನ್ನಾಎಖೇಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ದೇಶದೆಲ್ಲಡೇ ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ವಿದೇಶಗಳಲ್ಲಿ ಈಗಾಗಲೇ ಬೂಸ್ಟರ್ ಡೋಸ್ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಈಗ ಆರಂಭವಾಗಿದೆ.
ಬಿಪಿ, ಸುಗರ್ ಹಾಗೂ ಇತರೆ ಅನಾರೋಗ್ಯದ ಕಾರಣಗಳನ್ನೂ ನೀಡದೆ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಅರ್ಹರಿರುವ ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು. ಇಂಥ ದೊಡ್ಡ ರಾಷ್ಟ್ರದಲ್ಲಿ ಒಂದೇ ದಿನ ಲಸಿಕೆ ನೀಡಲು ಕಷ್ಟಸಾಧ್ಯ. ಆದರೇ, ಅರ್ಹತೆಯೊಂದಿರುವ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ಬೂಸ್ಟರ್ ಡೋಸ್ ಲಸಿಕೆಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿ ಹೇಳುವ ಕೆಲಸ ಮಾಡಬೇಕು. ಈಗಾಗಲೇ ಕೊರೊನಾ ಮೊದಲನೇ ಹಾಗೂ ಎರಡನೇ ಅಲೆಗಳು ಬಂದು ಅನೇಕ ಸಾವು, ನೋವುಗಳು ಸಂಭವಿಸಿವೆ.

ವೈದ್ಯಕೀಯ ವಿಜ್ಞಾನ ಲೋಕದ ಸತತ ಪರಿಶ್ರಮದಿಂದ ಲಸಿಕೆಗಳು ದೊರೆತಿವೆ. ಈಗಾಗಲೇ ಒಂದನೇ ಮತ್ತು ಎರಡನೇ ಹಂತದ ಲಸಿಕೆ ಕಾರ್ಯಗಳು ನಡೆದಿವೆ. ಎರಡು ಡೋಸ್ ಲಸಿಕೆ ಪಡೆದಿರುವ ಮತ್ತು ಬೂಸ್ಟರ್ ಡೋಸ್ ಗೆ ಅರ್ಹತೆಯೊಂದಿರುವವರು ಕೂಡಲೇ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು. ಬೂಸ್ಟರ್ ಡೋಸ್, ಉತ್ತಮ ಆರೋಗ್ಯಕ್ಕೆ ಮತ್ತು ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರಿಯಾಗುತ್ತದೆ. ನಮ್ಮ ಈ ಭಾಗದಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗಿ ಕಂಡುಬಂದಿಲ್ಲ. ಪ್ರಕರಣಗಳಿಲ್ಲವೆಂದು ಮೈಮರೆಯದೇ ಎಚ್ಚರಿಕೆಯಿಂದ ಮತ್ತು ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಜೀವನ ಸಾಗಿಸಬೇಕು.
ಕೊರೊನಾ ಮೂರನೇ ಅಲೆಗೆ ಅವಕಾಶಕೊಡಬಾರದೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಅಶೋಕ ಮೈಲಾರಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಗುಂಡಮ್ಮ ನಾಟೀಕರ್, ಉಪಾಧ್ಯಕ್ಷ ಸೈಯದ್ ಖದೀರ್, ಪಿಎಸ್ಐ ಮಡಿವಾಳಪ್ಪ, ಮಲ್ಲಪ್ಪ ಮನ್ನಾಎಖೇಳ್ಳಿ, ಶಂಕರ್ ಪಂಡಿತ್ ಜಿ, ಅಮರ್, ಇದಾಯಿತ್, ಶರಣಪ್ಪ ಬೋರಾಳ, ಖೈರ್ಯೋಧಿನ್ ಹವಲ್ದಾರ್ ಸೇರಿದಂತೆ ಅಧಿಕಾರಿಗಳು, ಮುಖಂಡರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅನೇಕರಿದ್ದರು.