ಬೆಂಗಳೂರು/ಬೆಳಗಾವಿ;- ಕಲಾಪದಲ್ಲಿ ಬ್ರ್ಯಾಂಡ್ ಬೆಂಗಳೂರು ಕಲಹ, ಬ್ರ್ಯಾಂಡ್ ಸಿಟಿ ಈಗ ಬಾಂಬ್ ಸಿಟಿ ಆಗಿದೆ ಎಂದು ಬಿಜೆಪಿ ಸದಸ್ಯರು ಹೇಳಿದ್ದಾರೆ.
ವಿಧಾನಸಭಾ ಅಧಿವೇಶನದ ಎರಡನೇ ದಿನ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಬಿಸಿಬಿಸಿ ಚರ್ಚೆಯಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಬಗ್ಗೆ ಶಾಂತಿನಗರ ಶಾಸಕ ಹ್ಯಾರಿಸ್ ಪ್ರಸ್ತಾಪ ಮಾಡಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಬ್ರ್ಯಾಂಡ್ ಸಿಟಿ ಈಗ ಬಾಂಬ್ ಸಿಟಿ ಆಗಿದೆ ಎಂದು ಕಿಚಾಯಿಸಿದ್ದಾರೆ. ಈ ಹೇಳಿಕೆಯಿಂದ ಸದನದಲ್ಲಿ ಆಡಳಿತ, ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಇತ್ತ ಪ್ರಶ್ನೋತ್ತರ ವೇಳೆಯಲ್ಲಿ ಬ್ರಾಂಡ್ ಬೆಂಗಳೂರು ಕುರಿತ ಪ್ರಶ್ನೆ ಸಂದರ್ಭ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಡಿಸಿಎಂ ಡಿ.ಕೆ. ಶಿವಕುಮಾರ್ ಪರವಾಗಿ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡುತ್ತಿದ್ದ ವೇಳೆಯೂ ಗದ್ದಲ ಉಂಟಾಯ್ತು.
ಇದಕ್ಕೂ ಮುನ್ನ ಸದನದಲ್ಲಿ ಸಚಿವರ ಗೈರು ಹಾಜರಿಗೆ ವಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ಏನೂ ಗಡಿಬಿಡಿ ಮಾಡಬೇಡಿ ಅಂದ್ರು. ಇದ್ದರಿಂದ ಮತ್ತಷ್ಟು ಸಿಟ್ಟಾದ ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿದ್ರು.
ಶೂನ್ಯ ವೇಳೆಯಲ್ಲಿ ಕೊಬ್ಬರಿ ವಿಚಾರ ಪ್ರಸ್ತಾಪ ಕೂಡಾ ಭಾರೀ ಗದ್ದಲಕ್ಕೆ ಕಾರಣವಾಯ್ತು. ಶಾಸಕ ಶಿವಲಿಂಗೇಗೌಡ ಕೊಬ್ಬರಿ ವಿಚಾರ ಪ್ರಸ್ತಾಪ ಮಾಡ್ತಿದ್ದಂತೆ ಮಧ್ಯಪ್ರವೇಶಿಸಿದ ಹೆಚ್ಡಿ ರೇವಣ್ಣ, ನಾನು ಪ್ರಸ್ತಾಪ ಮಾಡುತ್ತೇನೆ ಅಂತಾ ಸದನದ ಬಾವಿಗಿಳಿದ್ರು. ರೇವಣ್ಣಗೆ ಬೆಂಬಲಿಸಿ ಜೆಡಿಎಸ್ ಸದಸ್ಯರೂ ಸದನದ ಬಾವಿಗಿಳಿದರು.
ಇದ್ರಿಂದ ರೊಚ್ಚಿಗೆದ್ದ ಶಿವಲಿಂಗೇಗೌಡ, ನೀವು ವೈಯಕ್ತಿಕ ದ್ವೇಷ ಮಾಡುತ್ತಿದ್ದೀರಿ, ಮಾನ ಇದ್ಯಾ ನಿಮಗೆ ಅಂತಾ ಆಕ್ರೋಶ ಹೊರಹಾಕಿದ್ರು.
ಈ ವೇಳೆ ಬಸವರಾಜ ರಾಯರೆಡ್ಡಿ ತರಹ ಬಹಿಷ್ಕಾರ ಮಾಡಿ ಹೋಗಿ ಎಂದು ರೇವಣ್ಣಗೆ ಬಿಜೆಪಿ ನಾಯಕರು ಸಲಹೆ ಕೊಟ್ಟರು.