ಪೀಣ್ಯ ದಾಸರಹಳ್ಳಿ:’ ಸಂಸ್ಕೃತಿಯ ಲೋಕಕ್ಕೆ ಪುಸ್ತಕಗಳು ತಾಯಿ ಬೇರಿದ್ದಂತೆ. ಈ ‘ಸಿಕ್ಕು’ ಕೃತಿಯಲ್ಲಿ ವ್ಯಕ್ತಿಯ ಭಾವನೆ, ಮಾನಸಿಕ ಸಂಘರ್ಷಗಳ ಸೂಕ್ಷ್ಮತೆಯನ್ನು ‘ಸಿಕ್ಕು’ ಕಾದಂಬರಿಯಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ’ ಎಂದು ಕಾದಂಬರಿಗಾರ್ತಿ ಸಾಯಿಸುತೆ ತಿಳಿಸಿದರು.
ಎಂಟನೇ ಮೈಲಿ ಹತ್ತಿರದ ಅಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಸನಾತನಿ ವೇದಿಕೆ ಮತ್ತು ಧ್ಯಾನ ಪ್ರಕಾಶನ ವತಿಯಿಂದ ಆಯೋಜಿಸಲಾದ ಕಾದಂಬರಿಗಾರ್ತಿ ಮಮತಾ ವಾರನಹಳ್ಳಿ ಅವರ ‘ಸಿಕ್ಕು’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.
ವಿಸ್ಮಯ ಜಗತ್ತಿನ ಮನುಷ್ಯ ಸಂಬಂಧಗಳ ತೊಳಲಾಟವನ್ನು ಮನಮುಟ್ಟುವಂತೆ ಮಮತಾ ಅವರು ಕಟ್ಟಿಕೊಟ್ಟಿದ್ದಾರೆ’ ಎಂದರು.
ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ’ ಮಹಿಳೆ ತಮ್ಮ ಭಾವನೆಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಾಳೆ. ಸಾಹಿತ್ಯ, ಸಂಗೀತ ಕೂಡ ಹೆಣ್ಣಿನ ಸಾಮರ್ಥ್ಯದಿಂದ ಬರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಸಿಕ್ಕು, ಒಗಟುಗಳು ಇರುತ್ತವೆ. ಅದನ್ನು ವಿವೇಚನೆ ಮತ್ತು ವ್ಯವಧಾನದಿಂದ ಬಿಡಿಸಿಕೊಂಡರೆ ಬದುಕು ಸುಂದರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಶಾಸಕ ಎಸ್. ಮುನಿರಾಜು ಮಾತನಾಡಿ’ ವಿದ್ಯಾಭ್ಯಾಸದ ಜೊತೆಗೆ ಒಳ್ಳೊಳ್ಳೆ ಪುಸ್ತಕಗಳನ್ನು ಓದುವಂತಹ, ಬರೆಯುವಂತಹ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಮರ್ಶಕಿ ಪಿ. ಚಂದ್ರಿಕಾ ಮಾತನಾಡಿ’ ಸಮಾಜದ ಕುಟುಂಬ ವ್ಯವಸ್ಥೆಯ ಭಾವನಾತ್ಮಕ ಸಂಬಂಧ ಮತ್ತು ಮರಣದ ಭಯವನ್ನು ಬಿಟ್ಟು ಬದುಕುವ ಸ್ಥಿತಿಯನ್ನು ಬಿಂಬಿಸುವ ಕೃತಿಯಾಗಿದೆ’ ಎಂದರು.
ಸಮಾರಂಭದಲ್ಲಿ ಶಾಸಕ ಎಸ್. ಮುನಿರಾಜು, ಕತೆಗಾರ ಕಂನಾಡಿಗಾ ನಾರಾಯಣ, ಕಾಲೇಜಿನ ಪ್ರಾಂಶುಪಾಲ ಬಿ.ಎಂ. ವೆಂಕಟೇಶ್, ಸಾಹಿತಿ ವೈ.ಬಿ.ಎಚ್. ಜಯದೇವ್, ಕಾದಂಬರಿಗಾರ್ತಿ ಮಮತಾ ವಾರನಹಳ್ಳಿ, ಗಾಯಕ ಎನ್.ಡಿ. ಕೃಷ್ಣಮೂರ್ತಿ, ರಾಜೇಂದ್ರ ಕೊಣ್ಣೂರ ಮುಂತಾದವರಿದ್ದರು.