ಬೆಂಗಳೂರು:- ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ನ ಸಂದೇಶ ನೋಡಿದರೆ ಇದೊಂದು ಭಯೋತ್ಪಾದಕರ ಕೆಲಸದಂತೆ ಕಾಣುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಈ ಬಾಂಬ್ ಬೆದರಿಕೆ ಇ-ಮೇಲ್ನಲ್ಲಿ ಮುಸ್ಲಿಂ, ಅಲ್ಲಾಹು, ದೇವಸ್ಥಾನ, ಮುಂಬೈ ಹೋಟೆಲ್ ಮೇಲಿನ ದಾಳಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಬೆಂಗಳೂರನ್ನು ಭಯ ಬೀಳಿಸುವ ಹಾಗೂ ದೇಶಕ್ಕೆ ಬೆದರಿಕೆ ಹಾಕುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಇದನ್ನು ಖಂಡಿಸುತ್ತೇನೆ’ ಎಂದರು.
ಮಕ್ಕಳ ಜೀವ ಮುಖ್ಯ. ಪೋಷಕರು ಬಹಳ ಆತಂಕದಲ್ಲಿದ್ದಾರೆ. ಈ ಬೆದರಿಕೆ ಹಿಂದೆ ಭಯೋತ್ಪಾದನೆ ಹಿನ್ನೆಲೆಯುಳ್ಳವರ ಕೈವಾಡ ಇರುವಂತಿದೆ. ಬೆಂಗಳೂರು ನಗರದಲ್ಲಿ ಪದೇ ಪದೇ ಈ ರೀತಿ ಆದರೆ ಬೆಂಗಳೂರು ಬ್ರಾಂಡ್ಗೆ ತೊಂದರೆಯಾಗುತ್ತದೆ. ಇದರ ಹಿಂದೆ ದೊಡ್ಡ ಜಾಲ ಇರುವ ಸಾಧ್ಯತೆಯಿದ್ದು, ಪೊಲೀಸರು ತನಿಖೆ ನಡೆಸಿ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.