ಬೆಂಗಳೂರು:- ರಾಜ್ಯ ಸರ್ಕಾರದ ವಿರುದ್ಧ ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಸದನದಲ್ಲಿ ಸ್ಪೀಕರ್ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಶುಕ್ರವಾರ ರಾಜಭವನಕ್ಕೆ ತೆರಳಲು ನಿರ್ಧರಿಸಿದ್ದಾರೆ. ಅಲ್ಲದೇ ಸ್ಪೀಕರ್ ವಿರುದ್ಧ ದೋಸ್ತಿ ಪಕ್ಷಗಳು ರಾಜ್ಯಪಾಲರಿಗೆ ದೂರು ನೀಡಲಿದ್ದಾರೆ. ಈ ಕುರಿತು ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು, ಸರ್ಕಾರ ಮತ್ತು ಸ್ಪೀಕರ್ ವಿರುದ್ಧ ಆರ್.ಅಶೋಕ್ ಹಾಗೂ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ
ಕೇಂದ್ರದ ವಿರುದ್ಧ ನಿರ್ಣಯ ಮಂಡಿಸಿದ ಕುರಿತು ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಇಂದು ಕರಾಳ ದಿನ. ಬಿಎಸಿ ಸಭೆಯಲ್ಲಿ ಬಿಲ್ ಬಗ್ಗೆ ಮಾತ್ರ ಹೇಳಿದ್ದಾರೆ. ಇವತ್ತು ಏಕಾಏಕಿ ಕಳ್ಳನ ರೀತಿ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಾಡಿದ್ದಾರೆ. ಮುನ್ಸೂಚನೆ ನೀಡದೇ ಈ ರೀತಿ ಮಾಡಿದ್ದಾರೆ. ಕಳ್ಳರ ರೀತಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ದೂರುವ ಹಳೇ ಚಾಳಿ ಮುಂದುವರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಈ ರೀತಿ ಮಾಡಿದ್ದಾರೆ. ರಾಜಾರೋಷವಾಗಿ ತನ್ನಿ ಚರ್ಚೆ ಮಾಡುತ್ತೇವೆ. ಆದರೆ ಮೋಸದಿಂದ ಇವತ್ತು ನಿರ್ಣಯ ಮಂಡಿಸಿದ್ದಾರೆ ಎಂದು ಕಿಡಿಕಾರಿದರು.