ಚಾಮರಾಜನಗರ:- ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿರಂಗನ ಬೆಟ್ಟದಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಸಂಕ್ರಾಂತಿ ರಥೋತ್ಸವ ಚಿಕ್ಕಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಂಗಳವಾರ ನೆರವೇರಿತು.
ರಥೋತ್ಸವ ಹಿನ್ನೆಲೆಯಲ್ಲಿ ವಿವಿಧ ಬಗೆಯ ಹೂಗಳಿಂದ ತೇರನ್ನು ಸಿಂಗರಿಸಲಾಗಿತ್ತು, ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಗೋವಿಂದ ಗೋವಿಂದ ಎಂಬ ಜಯ ಘೋಷದೊಂದಿಗೆ ತೇರನ್ನು ಎಳೆದರು. ಮಹಾ ರಥೋತ್ಸವದಲ್ಲಿ ಪ್ರಮುಖವಾಗಿ ಶಂಖ,ಜಾಗಟೆಯ ನೀನಾದ ಮೊಳಗಿದವು. ಸಾವಿರಾರು ಭಕ್ತರು ಮನೆ ಗೋಡೆಗಳ ಮೇಲೆ ಕುಳಿತು ರಥೋತ್ಸವ ವೀಕ್ಷಣೆ ಮಾಡಿದರು.ಬೆಳಗ್ಗೆ 11:50ಕ್ಕೆ ರಥಾರೋಹನ ಮಾಡಲಾಯಿತು. 11:53 ಕ್ಕೆ ಗರುಡ ಹಾರಾಡಿತು.
ನಂತರ 12:25 ಕ್ಕೆ ತೇರನ್ನು ಎಳೆಯಲಾಯಿತು. ದೇವಸ್ಥಾನಕ್ಕೆ ಸುತ್ತು ಹಾಕಿದ ತೇರು ಬಳಿಕ ಸ್ವಸ್ಥಾನದಲ್ಲಿ ಬಂದು ಸೇರಿತ್ತು, ರಥೋತ್ಸವಕ್ಕೆ ಆಗಮಿಸಿದ ನವ ಜೋಡಿಗಳು ಹಾಗೂ ಭಕ್ತರು ತೆರಿಗೆ ಹಣ್ಣು,ದವನ ಎಸೆದು ಹರಕೆ ತೀರಿಸಿದರು.ಅಲ್ಲದೆ ಹೊಸ ವರ್ಷದ ಮೊದಲ ರಥೋತ್ಸವ ಹಿನ್ನೆಲೆಯಲ್ಲಿ ಈ ಭಾಗದ ರೈತರು ತಾವು ಬೆಳೆದ ಧಾನ್ಯಗಳನ್ನು ತೆರಿಗೆ ಎಸೆದು ದೇವರಿಗೆ ಸಮರ್ಪಿಸಿದರು.ಆ ಮೂಲಕ ಮುಂದಿನ ಇಳುವರಿ ವೃದ್ಧಿಸುವಂತೆ ದೇವರಲ್ಲಿ ಮೊರೆ ಇಟ್ಟರು.
ಪೋಡುಗಳಿಂದ ಆಗಮಿಸಿದ ಸೋಲಿಗರು
ಬಿಳಿಗಿರಿರಂಗನಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಅರಣ್ಯದ ಪೋಡುಗಳಲ್ಲಿ ವಾಸಿಸುವ ಸಾವಿರಾರು ಸೋಲಿಗರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು, ಸೋಲಿಗರೆ ಈ ತೇರು ಕಟ್ಟುವುದು ಇಲ್ಲಿನ ವಿಶೇಷ.ಬಿಳಿಗಿರಿರಂಗನಾಥ ಸ್ವಾಮಿ ಸೋಲಿಗರ ಕುಸುಮಾಲೆಯನ್ನು ವರಿಸಿದ್ದ ಹಿನ್ನೆಲೆಯಲ್ಲಿ ಸೋಲಿಗರು ರಂಗಭಾವ ಎಂದು ರಂಗಪ್ಪ ನನ್ನು ಕರೆಯುತ್ತಾರೆ.
ಬ್ಯಾಟ ಮಣೆ ಸೇವೆ..
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಬಿಳಿಗಿರಿರಂಗನಾಥ ಸ್ವಾಮಿ ಒಕ್ಕಲಿನವರು ಹಾಗೂ ಭಕ್ತರು ಅಕ್ಕಿ,ಬೆಲ್ಲ,ಕಾಯಿಯನ್ನು ನೀರಿನಲ್ಲಿ ನೆನೆಸಿ ಅದಕ್ಕೆ ಕಜ್ಜಾಯ ಬೆರೆಸಿ ಬ್ಯಾಟಿಮಣೆ ಹಾಕಿ ಅದನ್ನು ಪ್ರಸಾದ ಎಂದು ಸ್ವೀಕರಿಸಿದರು. ಅಲ್ಲದೆ ರಥೋತ್ಸವದಲ್ಲಿ ಭಕ್ತರಿಗೆ ನೀರು ಮಜ್ಜಿಗೆ ಪಾನಕ ಪುಳಿಯೋಗರೆ ಯನ್ನು ವಿತರಿಸಲಾಯಿತು.
ಬಿಗಿ ಪೊಲೀಸ್ ಬಂದೋಬಸ್ತ್…
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸ್ಥಳಕ್ಕೆ ಎಸ್.ಪಿ.ಪದ್ಮಿನಿ ಶಾಹೋ,ಎ.ಎಸ್.ಪಿ.ಉದೇಶ್, ಡಿ.ವೈ.ಎಸ್. ಪಿ.ಸೋಮೇಗೌಡ ಸ್ಥಳದಲ್ಲಿ ಮೊಕ್ಕಂ ಹೂಡಿ ಬಿಗಿಭದ್ರತೆ ಕೈಕೊಂಡರು.