ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ನಟನೆಯ ಸಿನಿಮಾದಲ್ಲಿ ನಟಿಸುವಂತೆ ತಮಗೆ ಆಫರ್ ಬಂದಿದ್ದು ನಿಜ ಎಂದಿದ್ದಾರೆ ಕನ್ನಡದ ಹೆಸರಾಂತ ಶಿವರಾಜ್ ಕುಮಾರ್ (Shivaraj Kumar). ಮೊದ ಮೊದಲು ಕನ್ನಡದ ಹೊರತಾಗಿ ಬೇರೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಶಪಥ ಮಾಡಿದ್ದರು ಶಿವಣ್ಣ. ಯಾವಾಗ ಒಪ್ಪಿಕೊಳ್ಳೋಕೆ ಶುರು ಮಾಡಿದರೂ, ಅಲ್ಲಿಂದ ಅನೇಕ ಕರೆಗಳು ಅವರಿಗೆ ಬಂದಿವೆ. ಅದರಲ್ಲೂ ಜೈಲರ್ ಗೆಲುವಿನ ನಂತರ ಬೇಡಿಕೆ ಇನ್ನೂ ಹೆಚ್ಚಾಗಿದೆ.
ಜೈಲರ್ ಒಪ್ಪಿಕೊಳ್ಳುವಾಗಲೇ ಧನುಷ್ (Dhanush) ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೂ ಸಹಿ ಮಾಡಿದ್ದರು ಶಿವರಾಜ್ ಕುಮಾರ್. ಇದೀಗ ರಾಮ್ ಚರಣ್ ಅವರ ಸಿನಿಮಾದಲ್ಲೂ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಒಪ್ಪಿಗೆ ಸೂಚಿಸಿದೇ ಇದ್ದರೂ, ಆಫರ್ ಬಂದಿದ್ದು, ಮಾತುಕತೆ ನಡೆದಿದ್ದು ನಿಜ ಎಂಬುದು ಬಹಿರಂಗವಾಗಿದೆ. ಜೈಲರ್ ಸಿನಿಮಾದ ನಂತರ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ವಿವಿಧ ಬಗೆಯ ಬಂದೂಕು ಹಿಡಿದುಕೊಂಡಿರುವ ಇಬ್ಬರು ಸ್ಟಾರ್ ನಟರು ತೆರೆಯ ಮೇಲೆ ಕಾಳಗ ಮಾಡಲಿದ್ದಾರೆ ಎನ್ನುವ ಕುತೂಹಲವನ್ನು ಉಂಟು ಮಾಡಿದೆ. ಧನುಷ್ ಕೈಯಲ್ಲಿ ಒಂದು ಬಗೆಯ ಬಂದೂಕು ಇದ್ದರೆ, ಶಿವರಾಜ್ ಕುಮಾರ್ ಮತ್ತೊಂದು ಬಗೆಯ ಬಂದೂಕು ಹಿಡಿದಿದ್ದಾರೆ. ಇಬ್ಬರ ಲುಕ್ ಕೂಡ ಸಖತ್ ಕ್ಯಾಚಿ ಆಗಿದೆ. ಹೀಗಾಗಿ ತೆರೆಯ ಮೇಲೆ ಇಬ್ಬರೂ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಇರುವ ಕಾತರವಾಗಿದೆ.