ಬೆಟ್ಟಿಂಗ್ ಆಪ್ ಪ್ರಚಾರ ಮಾಡುತ್ತಿದ್ದ ತಾರೆಯರಿಗೆ ತೆಲಂಗಾಣ ಪೊಲೀಸರು ಬಿಸಿಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಬೆಟ್ಟಿಂಗ್ ಅಪ್ಲಿಕೇಷನ್ ಗಳನ್ನು ಪ್ರಮೋಷನ್ ಮಾಡುತ್ತಿದ್ದ 25 ಕ್ಕೂ ಹೆಚ್ಚು ನಟ ನಟಿಯರ ವಿರುದ್ಧ ಕೇಸ್ ದಾಖಲಾಗಿದೆ. ಬೆಟ್ಟಿಂಗ್ ಆಪ್ಗಳನ್ನು ಪ್ರಚಾರ ಮಾಡಿ ಯುವ ಜನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಫಣೀಂದ್ರ ಶರ್ಮಾ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹೈದರಾಬಾದ್ನ ಮಿಯಾಪುರ್ ಪೊಲೀಸರು ಟಾಲಿವುಡ್ ನಟರು ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸ್ರ್ಗಳ ಮೇಲೆ ಕೇಸ್ ದಾಖಲಿಸಿದ್ದಾರೆ.
ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್ , ಅನನ್ಯಾ, ಶ್ರೀಮುಖಿ, ಸಿರಿ ಹನುಮಂತು, ಶ್ಯಾಮಲಾ, ವರ್ಷಿಣಿ, ಶೋಭಾ, ನೇಹಾ, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಸನ್ನಿ ಯಾದವ್, ಟೇಸ್ಟಿ ತೇಜಾ ಮತ್ತು ರಿತು ಸೇರಿದಂತೆ ಹಲವರ ಮೇಲೆ ಎಫ್ಐಆರ್ ದಾಖಲಾಗಿದೆ.
ಬೆಟ್ಟಿಂಗ್ ಆಪ್ ಪ್ರಚಾರಕ್ಕೆ ತೆಲಂಗಾಣ ಸರ್ಕಾರ ಈಗಾಗಲೇ ನಿಷೇಧ ಹೇರಿದೆ. ಇದರ ಹೊರತಾಗಿಯೂ ಬೆಟ್ಟಿಂ ಗ್ಆಪ್ ಪರ ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ, ಬೆಟ್ಟಿಂಗ್ ಮತ್ತು ಜೂಜಾಟದ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುವ ಸೆಲೆಬ್ರಿಟಿಗಳು ಸಾಕಷ್ಟಿದ್ದಾರೆ. ಈ ಅಪ್ಲಿಕೇಶನ್ಗಳು ಕಾನೂನುಬಾಹಿರವಾಗಿವೆ. ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳು ಹಣಕ್ಕಾಗಿ ಈ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುತ್ತಾರೆ. ಇದು ಜನರನ್ನು, ವಿಶೇಷವಾಗಿ ಹಣದ ಅವಶ್ಯಕತೆಯಿರುವವರನ್ನು, ಅಪ್ಲಿಕೇಶನ್ಗಳಲ್ಲಿ ಹಣ ಹೂಡಲು ಮತ್ತು ವ್ಯಸನಕ್ಕೆ ಬೀಳಲು ಪ್ರೇರೇಪಿಸುತ್ತದೆ ಎನ್ನಲಾಗಿದೆ.