ಬೆಂಗಳೂರು:- ಕಾಂತರಾಜು ಆಯೋಗ ವರದಿಯನ್ನು ರಾಜ್ಯ ಸರಕಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಬೆಂಗಳೂರು ವಿಶ್ವ ವಿದ್ಯಾಲಯ ಬಂದ್ ಮಾಡಿ ಬೃಹತ್ ಹೋರಾಟ ನಡೆಸಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣದಲ್ಲಿ ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಕರೆ ನೀಡಿದ್ದ ವಿಶ್ವವಿದ್ಯಾಲಯ ಬಂದ್ ಹೋರಾಟಕ್ಕೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಎಲ್ಲ ಮಾದರಿಯ ಬೋಧನಾ ಚಟುವಟಿಕೆಗಳನ್ನು ಜ್ಞಾನ ಭಾರತಿ ಆವರಣದಲ್ಲಿ ನಿಲ್ಲಿಸದ್ದರಿಂದ ಕೊಠಡಿಗಳು ಖಾಲಿಯಾಗಿದ್ದವು. ಮುಖ್ಯ ಕಚೇರಿ ಎದುರು ಸೇರಿದ್ದ ಪ್ರತಿಭಟನಾಕಾರರು ರಾಜ್ಯ ¸ಸರಕಾರ ಕಾಂತರಾಜು ಆಯೋಗ ವರದಿಯನ್ನು ಬಹಿರಂಗಪಡಿಸುವಂತೆ ಘೋಷಣೆ ಕೂಗಿದರು. ಆನಂತರ, ಬೆಂಗಳೂರು ವಿವಿ ಕುಲಸಚಿವರಿಗೆ ಮನವಿ ಪತ್ರ ಸಲ್ಲಿಕೆ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ನಾಯಕ ಲೋಕೇಶ್ ರಾಮ್, ಹಿಂದುಳಿದ ವರ್ಗಗಳ ಆಯೋಗದ ಮೂಲಕ ವಿಶ್ವಾಸಾರ್ಹ ದತ್ತಾಂಶ ಆಧಾರಿತ ಮಾಹಿತಿಯನ್ನು ಮೂರು ಹಂತದ ಪರಿಶೀಲನೆಗೆ ಒಳಪಡಿಸಿ ಪ್ರತ್ಯೇಕ ರಾಜಕೀಯ ಮೀಸಲಾತಿ ರೂಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ 2010ರಲ್ಲಿ ರಾಜ್ಯಗಳಿಗೆ ಆದೇಶ ನೀಡಿದೆ. ಹಾಗಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕಾಂತರಾಜು ವರದಿ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.