ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ ಎರಡು ದಿನ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸದ್ಯ ಬಂಗಾಳ ಕೊಲ್ಲಿಯಲ್ಲಿ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಕರ್ನಾಟಕದಲ್ಲಿಯೂ ಮಳೆಯಾಗಲಿದ್ದು, ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ. ದಕ್ಷಿಣ ಒಳನಾಡಿನ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣದಿಂದ ತೀವ್ರ ಪ್ರಮಾಣದಲ್ಲಿ ಮಳೆಯಾಗಬಹುದಾಗಿದ್ದು, ಬಹುಭಾಗ ಮೋಡ ಕವಿದ ವಾತಾವರಣ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಅಲ್ಪ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ ಹಾಗೂ ಬೀದರ್, ರಾಯಚೂರಿನ ಒಂದೆರಡು ಕಡೆ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಹೆಚ್ಚಿರಲಿದ್ದು, ಅಲ್ಪದಿಂದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಹಾಗೂ ಉತ್ತರ ಕನ್ನಡದಲ್ಲಿ ಚಂಡಮಾರುತದ ಭಾರಿ ಪ್ರಭಾವ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅಲ್ಲಲ್ಲಿ ಭಾರಿ ಮಳೆಯಾಗಬಹುದು ಎಂದು ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 48 ಗಂಟೆಯಲ್ಲಿ ಕನಿಷ್ಠ ಉಷ್ಣಾಂಶವು ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬಹುತೇಕ ಕಡೆ ರಾತ್ರಿ ವೇಳೆಗೆ ಹಾಗೂ ಬೆಳಗಿನ ಜಾವ ಚಳಿಗಾಳಿ ಬೀಸಲಿದ್ದು, ಚಳಿ ಚಳಿ ವಾತಾವರಣ ನಿರ್ಮಾಣವಾಗಲಿದೆ.