ಬೆಂಗಳೂರು:- ಇನ್ಮುಂದೆ ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ತಾಜಾ ಮೀನು ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದು ಹಾಗೂ ಮನೆ ಬಾಗಿಲಿಗೆ ತಾಜಾ ಮೀನು ತಲುಪಿಸುವ ಉದ್ದೇಶದಿಂದ ಸರ್ಕಾರ ಮತ್ಸ್ಯವಾಹಿನಿ ವಾಹನ ಆರಂಭಿಸಿದೆ. ಸದ್ಯ 150 ವಾಹನ ಸೇವೆಯನ್ನು ಮೀನುಗಾರಿಕಾ ಇಲಾಖೆ ಆರಂಭಿಸಿದ್ದು, ಮುಂದೆ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ.
ಈ 150 ಮತ್ಸ್ಯವಾಹಿನಿ ವಾಹನಗಳು ಬೆಂಗಳೂರು ನಗರದಲ್ಲಿ ಸಂಚರಿಸಲಿದ್ದು, ಬೆಳಗ್ಗೆ ತಾಜಾ ಮೀನು, ಸಂಜೆ ಮೀನು ಖಾದ್ಯಗಳ ಮಾರಾಟ ಮಾಡಲಾಗುತ್ತದೆ. ವಾಹನ ಭದ್ರತಾ ಠೇವಣಿ 2 ಲಕ್ಷ ರೂ ಹಾಗೂ ಮಾಸಿಕ 3000 ರೂ. ಬಾಡಿಗೆಯನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. ಬ್ಯಾಟರಿ ಚಾಲಿತ ತ್ರಿಚಕ್ರ ವಾಹನದಲ್ಲಿ ಮೀನು ಖಾದ್ಯ ಮಾಡುವ ವ್ಯವಸ್ಥೆ ಕೂಡ ಇದ್ದು, ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೆ 150 ವಾಹನಗಳನ್ನು ಸರ್ಕಾರ ವಿತರಿಸುವ ಸಾಧ್ಯತೆ ಇದೆ.
ಇನ್ನು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ಮೀನು ನಮ್ಮ ಆಹಾರ ಸಂಸ್ಕೃತಿಯ ಪ್ರಮುಖ ಭಾಗ. ಅತ್ಯಂತ ಆರೋಗ್ಯಕಾರಿ ಆಹಾರ. ಮೀನಿನ ಸಂತತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು ನಮ್ಮ ಸರ್ಕಾರ ಎಲ್ಲ ಅಗತ್ಯ ನೆರವನ್ನೂ ನೀಡುತ್ತದೆ ಎಂದರಲ್ಲದೇ, ಮೀನುಗಾರ ಸಮುದಾಯದ ಮಹಿಳೆಯರಿಗೆ ನೀಡಲಾಗುತ್ತಿದ್ದ 50 ಸಾವಿರ ರೂ. ಸಹಾಯ ಧನವನ್ನು 3 ಲಕ್ಷಕ್ಕೆ ಏರಿಸಿದ್ದು ನಮ್ಮ ಸರ್ಕಾರ. ಮುಂದಿನ ವರ್ಷದಿಂದ ಮೀನುಗಾರ ಸಮುದಾಯಕ್ಕೆ ಮನೆ ಕಟ್ಟಿಸಿಕೊಡುವ ಕೆಲಸ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇನ್ನು ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಮೀನನ್ನು ನಾವು ದೇವರ ಸ್ವರೂಪ ಎಂದು ಕರೆಯುತ್ತೇವೆ. ಶ್ರೀಮನ್ ನಾರಾಯಣನಿಗೆ ಮೀನನ್ನು ಹೋಲಿಸುತ್ತೇವೆ. ನಾವು ಚುನಾವಣೆಗೆ ಮುಂಚಿತವಾಗಿ ಮೀನುಗಾರಿಕಾ ಸಮುದಾಯಕ್ಕೆ ಸಾಕಷ್ಟು ಭರವಸೆ ನೀಡಿದ್ದೆವು ಅವನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದರು.