ಮಾರ್ಚ್ನಲ್ಲಿ ಜರುಗಲಿರುವ ಮಹಿಳಾ ಏಕದಿನ ವಿಶ್ವಕಪ್ಗೆ 15 ಸದಸ್ಯರ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೆ ಸ್ಟಾರ್ ಆಟಗಾರ್ತಿ ಜೆಮೈಮಾ ರೋಡ್ರಿಗಸ್ ಮತ್ತು ಸ್ಟಾರ್ ಬೌಲರ್ ಶಿಖಾ ಪಾಂಡೆ ಅವರನ್ನು ಕೈ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ನ್ಯೂಜಿಲೆಂಡ್ನಲ್ಲಿ ಮಾರ್ಚ್ 4ರಿಂದ ಶುರುವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಮತ್ತು ಅದಕ್ಕೂ ಮೊದಲೇ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೂ ತಂಡವನ್ನೂ ಪ್ರಕಟಿಸಲಾಗಿದೆ.
ಏಕದಿನ ತಂಡಕ್ಕೆ ನಾಯಕಿ ಮಿಥಾಲಿ ರಾಜ್, ಉಪನಾಯಕಿಯಾಗಿ ಹರ್ಮನ್ ಪ್ರೀತ್ ಕೌರ್ ಆಯ್ಕೆಯಾಗಿದ್ದಾರೆ. ಟಿ20 ತಂಡಕ್ಕೆ ಹರ್ಮನ್ ಪ್ರೀತ್ ಕೌರ್ ನಾಯಕಿಯಾದರೆ, ಸ್ಮೃತಿ ಮಂದಾನ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ. ಅನುಭವಿ ಆಟಗಾರ್ತಿ ಮತ್ತು ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದ ಜಮೈಮಾ ರೋಡ್ರಿಗಸ್ಗೆ ಅವಕಾಶ ನೀಡದೇ ಇರೋದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಕಳೆದ ಸರಣಿಗಳಲ್ಲಿ ಮತ್ತು ಇತ್ತೀಚೆಗೆ BBLನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಆದರೆ ಅಂತಹ ಆಟಗಾರ್ತಿಗೇ ವಿಶ್ವಕಪ್ಗೆ ಕೈಬಿಟ್ಟಿರೋದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿ ಬರ್ತಿವೆ. ಅಷ್ಟೆ ಅಲ್ಲ, ಸ್ಟಾರ್ ಬೌಲರ್ ಶಿಖಾ ಪಾಂಡೆ, ಕನ್ನಡತಿ ವೇದಾ ಕೃಷ್ಣಮೂರ್ತಿಗೂ ಮಣೆ ಹಾಕಲಿಲ್ಲ. ಹಾಗೆಯೇ ಪ್ರಿಯಾ ಪೂನಿಯಾ, ಹರ್ಲೀನ್ ಡಿಯೋಲ್ ಅವರಿಗೂ ಕೊಕ್ ನೀಡಲಾಗಿದ್ದು, ಹೊಸಬರಿಗೆ ಹೆಚ್ಚು ಅವಕಾಶ ನೀಡಲಾಗಿದೆ.
ಗುಜರಾತ್ನ ಯಾಸ್ತಿಕಾ ಭಾಟಿಯಾ, ಸ್ನೇಹ್ ರಾಣಾ, ಮೇಘನಾ ಸಿಂಗ್, ರೇಣುಕಾ ಸಿಂಗ್ ರಾಕೂರ್ ಅವರಿಗೆ ಭರ್ಜರಿ ಅವಕಾಶ ಸಿಕ್ಕಿದೆ. ವಿಶ್ವಕಪ್ ಮೊದಲು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನ ಭಾರತ ಆಡಲಿದೆ. ಫೆಬ್ರವರಿ 11ರಿಂದ 24ರವರೆಗೂ ಈ ಸರಣಿ ನಡೆಯಲಿದೆ. ಆದರೆ ಇದಕ್ಕೂ ಮೊದಲು ಫೆಬ್ರವರಿ 9ರಂದು ಏಕೈಕ ಟಿ20 ಪಂದ್ಯವನ್ನು ಭಾರತ ಆಡಲಿದೆ.
ಇನ್ನು ನ್ಯೂಜಿಲೆಂಡ್ನಲ್ಲೇ ಏಕದಿನ ವಿಶ್ವಕಪ್ ನಡೆಯಲಿದ್ದು,
ಮಾರ್ಚ್ 6 ರಿಂದ ಭಾರತ ತಂಡ, ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಬಳಿಕ ಮಾರ್ಚ್ 10ರಂದು ನ್ಯೂಜಿಲೆಂಡ್ ವಿರುದ್ಧ, 12ರಂದು ವೆಸ್ಟ್ ಇಂಡೀಸ್ ವಿರುದ್ಧ, 16ರಂದು ಇಂಗ್ಲೆಂಡ್ ಎದುರು, 19ರಂದು ಆಸ್ಟ್ರೇಲಿಯಾ, 22ರಂದು ಬಾಂಗ್ಲಾ ಎದುರು, ಮಾರ್ಚ್ 27ರಂದು ಸೌತ್ ಆಫ್ರಿಕಾ ವಿರುದ್ಧ ಲೀಗ್ ಹಂತದಲ್ಲಿ ಭಾರತದ ವನಿತೆಯರು ಸೆಣಸಾಟ ನಡೆಸಲಿದ್ದಾರೆ.