ಬೆಂಗಳೂರು: ಹೊಸವರ್ಷದ ಹಿಂದಿನ ದಿನವಾದ ಇಂದು ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗೆ ಸಂಜೆ 6 ಗಂಟೆಗೆ ಬ್ಯಾರಿ ಕೇಡ್ ಹಾಕಲಾಗುತ್ತದೆ ಎಂದು ಡಿಸಿಪಿ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ನಿಯಂತ್ರಣದ ಸಲುವಾಗಿ ಹೊಸವರ್ಷದ ಆಚರಣೆಗೆ ಬ್ರೇಕ್ ಹಾಕಲಾಗಿದ್ದು, ಪಬ್, ರೆಸ್ಟೊರೆಂಟ್ಗಳಲ್ಲಿ ಮುಂಗಡ ಕಾಯ್ದಿರಿಸಿಕೊಂಡಿದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸುಮ್ಮನೆ ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ. ಟಿಕೆಟ್ ಬುಕ್ ಮಾಡಿರುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ತೆಗೆದುಕೊಂಡಿರಬೇಕು. ಎರಡೂ ರಸ್ತೆಗಳಲ್ಲಿ ಎಲ್ಲ ಅಂಗಡಿಗಳು, ಪಬ್, ಬಾರ್, ರೆಸ್ಟೊರೆಂಟ್ಗಳನ್ನು ರಾತ್ರಿ 10 ಗಂಟೆಗೆ ಬಂದ್ ಮಾಡಲಾಗುತ್ತದೆ. ಅವಧಿ ಮೀರಿಯೂ ತೆರೆದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಎಂಜಿ ರಸ್ತೆಯಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ ಎಂದು ಖಡಕ್ಕಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
