ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ಪೋಷಕರು ಮನೆಗೆ ಕರೆದೊಯ್ದಿದ್ದಾರೆ.
ಬಸವೇಶ್ವರ ನಗರದ ನ್ಯಾಷನಲ್, ವಿದ್ಯಾಶಿಲ್ಪ, ಎನ್ಪಿಎಸ್, ಕಾರ್ಮೆಲ್, ಹೆಬ್ಬಗೋಡಿಯ ಎಬಿನೈಜರ್ ಸೇರಿದಂತೆ 15 ಶಾಲೆಗಳಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಎಂದಿನಂತೆ ಶಾಲೆಗಳು ಆರಂಭವಾಗುತ್ತಿದ್ದಂತೆ, ಶಾಲೆಗಳ ಇಮೇಲ್ ಪರಿಶೀಲಿಸಿದ್ದು, ಬೆದರಿಕೆ ಸಂದೇಶ ಬಂದಿದ್ದು ಗೊತ್ತಾಗಿದೆ. ಕೂಡಲೇ ಶಾಲಾ ಆಡಳಿತ ಮಂಡಳಿಗಳು ಮಕ್ಕಳನ್ನು ಶಾಲೆಯಿಂದ ಹೊರ ಕಳುಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬಾಂಬ್ ನಿಷ್ಕ್ರಿಯ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದರು. ಬಾಂಬ್ ಬೆದರಿಕೆ ಸಂದೇಶ ತಿಳಿಯುತ್ತಿದ್ದಂತೆ ಪೋಷಕರು ಆತಂಕ ವ್ಯಕ್ತಪಡಿಸಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶಾಲೆಗಳಿಗೆ ಭೇಟಿ ನೀಡಿದರು.
ನಗರದ ಕೆಲವು ಶಾಲೆಗಳಿಗೆ ಇಂದು ಬೆಳಗ್ಗೆ ಇಮೇಲ್ ಮೂಲಕ ‘ಬಾಂಬ್ ಬೆದರಿಕೆ’ ಕರೆಗಳನ್ನು ಕಳುಹಿಸಲಾಗಿದೆ. ಈ ಬಗ್ಗೆ ನಮ್ಮ ಬಾಂಬ್ ಪತ್ತೆ ದಳದವರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈವರೆಗಿನ ತಪಾಸಣೆಯಿಂದ ಇವು ಸುಳ್ಳು ಕರೆಗಳೆಂದು ಕಂಡುಬರುತ್ತಿದೆ. ಆದಾಗ್ಯೂ ಇಮೇಲ್ ಕಳುಹಿಸಿದ ವ್ಯಕ್ತಿಗಳ ಪತ್ತೆಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.