ಬೆಂಗಳೂರು:-ಬೆಂಗಳೂರು ಕಂಬಳಕ್ಕೆ ಕ್ಷಣಗಣನೆ ಶುರುವಾಗಿದೆ.
ತುಳುಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಪ್ಯಾಲೇಸ್ ಗ್ರೌಂಡ್ನಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜಿಸಿದೆ. ಕೋಣಗಳ ಸ್ಪರ್ಧೆಗೆ ಈಗಾಗಲೇ ನೀರಿನ ಟ್ರ್ಯಾಕ್(ಕರೆ) ನಿರ್ಮಿಸಲಾಗಿದ್ದು, ತ್ರಿವರ್ಣಧ್ವಜದ ಬಣ್ಣಗಳಿಂದ ಅಲಂಕರಿಸಲಾಗಿದೆ. ಕಂಬಳದ ಟ್ರ್ಯಾಕ್ 157 ಮೀಟರ್ ಉದ್ದ ಹಾಗೂ 8 ಮೀಟರ್ ಅಗಲವಿದೆ. ಒಟ್ಟು 200ಕ್ಕೂ ಹೆಚ್ಚು ಕೋಣಗಳು ಕಂಬಳಕ್ಕೆ ಇಳಿಯಲಿವೆ. ಕೋಣಗಳಿಗೆ ಸಕಲೇಶಪುರ, ಹಾಸನ, ನೆಲಮಂಗಲ ಮೂರು ಕಡೆ ಕೋಣಗಳ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿದ್ದು, ಇಂದು ಕೋಣಗಳು ರಾಜಧಾನಿಗೆ ಬಂದಿಳಿಯಲಿವೆ.
ಎರಡು ದಿನದ ಕಂಬಳಕ್ಕೆ ಅಂದಾಜು 6 ರಿಂದ 7 ಲಕ್ಷದಷ್ಟು ಜನರು ಬರುವ ಸಾಧ್ಯತೆ ಇದ್ದು, ಜನರು ಕಂಬಳ ವೀಕ್ಷಿಸಲು ದೊಡ್ಡ ಸ್ಟೇಜ್ಗಳನ್ನು ನಿರ್ಮಾಣ ಮಾಡಲಾಗಿದೆ. ವಿಐಪಿ, ವಿವಿಐಪಿ, ಸಾರ್ವಜನಿಕರಿಗೆ ಪ್ರತ್ಯೇಕ ಪಾಸ್, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ದೂರದ ಊರುಗಳಿಂದ ಕಂಬಳಕ್ಕೆ ಬಂದಿರುವ ಕೋಣಗಳ ಬಗ್ಗೆ ಮಾಲೀಕರು ವಿಶೇಷ ಗಮನ ವಹಿಸಿದ್ದಾರೆ. ಕಂಬಳದ ಕೋಣಗಳಿಗೆ ಕುಡಿಯಲು ನೀರು ಸಹ ಮಂಗಳೂರಿನಿಂದಲೇ ತರಲಾಗಿದೆ. ಕಂಬಳದ ಕೋಣಗಳನ್ನು ಹೆಚ್ಚು ಪ್ರೀತಿಯಿಂದ ಸಾಕುವುದರಿಂದ ಅದಕ್ಕೆ ಹಾಕುವ ಆಹಾರದಿಂದ ಹಿಡಿದು ಕುಡಿಯುವ ನೀರಿನ ತನಕ ಮಾಲೀಕರು ಹೆಚ್ಚು ಜಾಗೃತೆ ವಹಿಸಿದ್ದಾರೆ ಎಂದು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದ್ದಾರೆ.
ಕಂಬಳದಲ್ಲಿ ಗೆದ್ದ ಜೋಡಿಗೆ ಮೊದಲ ಬಹುಮಾನವಾಗಿ 16 ಗ್ರಾಂ ಚಿನ್ನದ ಪದಕ ಹಾಗೂ ಒಂದು ಲಕ್ಷ ನಗದು ನೀಡಲಾಗುತ್ತದೆ. ಎರಡನೇ ಸ್ಥಾನಕ್ಕೆ 8 ಗ್ರಾಂ ಚಿನ್ನದ ಪದಕ ಹಾಗೂ 50 ಸಾವಿರ ನಗದು, ಮೂರನೇ ಸ್ಥಾನಕ್ಕೆ 4 ಗ್ರಾಂ ಚಿನ್ನ ಮತ್ತು 25 ಸಾವಿರ ಹಣ ನೀಡಲಾಗುತ್ತಿದೆ ಎಂದು ಗುರುಕಿರಣ್ ಮಾಹಿತಿ ನೀಡಿದರು.