ನವದೆಹಲಿ:- ಇಂದಿನಿಂದ ಪೇಟಿಎಂಗೆ ನಿರ್ಬಂಧ ಇರಲಿದೆ. ನಿರ್ಬಂಧದಿಂದಾಗಿ ಪೇಟಿಎಂ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಕೋಟಿ ರೂ.ನಷ್ಟ ಅನುಭವಿಸಿದೆ.
ಪೇಟಿಎಂ ಆಯಪ್ ಹೊಂದಿರುವವರಿಗೆ ಯಾವೆಲ್ಲ ಸೇವೆ ಲಭ್ಯವಿರುವುದಿಲ್ಲ? ಯಾವೆಲ್ಲ ಸೌಲಭ್ಯಗಳು ಸಿಗಲಿವೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಸೇವಿಂಗ್ಸ್ ಖಾತೆಯಲ್ಲಿರುವ ಹಣದ ಗತಿ ಏನು?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆದಾರರು ತಮ್ಮ ಖಾತೆಯಲ್ಲಿ ಹಣ ಉಳಿದಿದ್ದರೆ ಮಾರ್ಚ್ 15ರ ನಂತರವೂ ಹಲವು ರೀತಿಯಲ್ಲಿ ಆ ಹಣವನ್ನು ಬಳಸಬಹುದಾಗಿದೆ. ಫಾಸ್ಟ್ಟ್ಯಾಗ್, ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಖಾತೆಗಳ ವ್ಯಾಲೆಟ್ಗಳ ಮೂಲಕ ಸೇವಿಂಗ್ಸ್ ಖಾತೆಯಲ್ಲಿ ಉಳಿದಿರುವ ಹಣವನ್ನು ವ್ಯಯಿಸಬಹುದಾಗಿದೆ.
ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರಗಳು
ಗ್ರಾಹಕರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲು ಆಗಲ್ಲ. ಆದರೆ, ಮಾರ್ಚ್ 15ರ ನಂತರವೂ ವಿತ್ಡ್ರಾ ಅಥವಾ ಟ್ರಾನ್ಸ್ಫರ್ ಮಾಡಬಹುದು
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಗಳಿಗೆ ಸ್ಯಾಲರಿ ಕ್ರೆಡಿಟ್ ಆಗುವುದಿಲ್ಲ, ಸರ್ಕಾರದ ಯೋಜನೆಯ ಹಣ (DBT) ಜಮೆಯಾಗುವುದಿಲ್ಲ. ಆದರೆ, ಕ್ಯಾಶ್ಬ್ಯಾಕ್, ರಿಫಂಡ್ ಆಗಲಿದೆ.
ಮಾರ್ಚ್ 15ರ ನಂತರ ಗ್ರಾಹಕರು ಅವರ ವ್ಯಾಲೆಟ್ಗಳಿಗೆ ಹಣ ಜಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೂ, ಉಳಿದಿರುವ ಹಣವನ್ನು ವ್ಯಯಿಸಬಹುದಾಗಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೂಲಕ ಫಾಸ್ಟ್ಟ್ಯಾಗ್ ರಿಚಾರ್ಜ್ ಮಾಡಿಕೊಳ್ಳಲು ಆಗಲ್ಲ. ಆದರೆ, ಫಾಸ್ಟ್ಟ್ಯಾಗ್ನಲ್ಲಿ ಉಳಿದ ಮೊತ್ತವನ್ನು ವ್ಯಯಿಸಬಹುದಾಗಿದೆ.
ಮಾರ್ಚ್ 15ರ ನಂತರವೂ ಪೇಟಿಎಂ ಆಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದಾಗಿದೆ. ಆದರೆ, ಕ್ರೆಡಿಟ್ ಕಾರ್ಡ್ ಮೂಲಕ ವ್ಯಾಲೆಟ್ಗೆ ಹಣ ಜಮೆ ಮಾಡಿಕೊಳ್ಳಲು ಆಗುವುದಿಲ್ಲ.
ಆರ್ಬಿಐ ನಿರ್ಬಂಧ ಏಕೆ?
ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಆರ್ಬಿಐ ನಿರ್ಬಂಧ ಹೇರಿದೆ. ಒಂದೇ ಒಂದು ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಮೂಲಕ 1,000 ಕ್ಕೂ ಹೆಚ್ಚು ಖಾತೆಗಳನ್ನು ಲಿಂಕ್ ಮಾಡಿರುವುದು ಕಂಡುಬಂದಿದೆ. ಆರ್ಬಿಐ ಮತ್ತು ಲೆಕ್ಕಪರಿಶೋಧಕರು ನಡೆಸಿದ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಬ್ಯಾಂಕ್ ಸಲ್ಲಿಸಿದ ಮಾಹಿತಿ ತಪ್ಪಾಗಿದೆ ಎಂದು ತಿಳಿದುಬಂದಿತ್ತು. ಕೆಲವು ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿರಬಹುದು ಎಂದು ಆರ್ಬಿಐ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.