ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಹಲವು ವರ್ಷಗಳಿಂದ ನಡೆದುಕೊಂಡೆ ಬಂದಿದೆ. ಈ ಬಗ್ಗೆ ಅನೇಕ ನಟಿಯರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸ್ಟಾರ್ ನಟಿಯರಿಂದ ಹಿಡಿದು ಸಣ್ಣ ಪುಟ್ಟ ನಟಿಯರೂ ಕೂಡ ಈ ಕಾಸ್ಟಿಂಗ್ ಕೌಚ್ ಗೆ ಒಳಗಾಗಿದ್ದಾರೆ. ಇದೀಗ ತಮಿಳು ಚಿತ್ರರಂಗದ ನಟಿ ಬಾಲಾಂಬಿಕಾ ತಮಗಾದ ಕರಾಳ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ಕೆ.ಎಸ್ ಗೋಪಾಲಕೃಷ್ಣನ್ ಅವರ ಸಹಾಯಕ ನಿರ್ದೇಶಕರಾಗಿದ್ದ, ರಾಮಸ್ವಾಮಿ ಅವರ ಮಗಳು ಈ ಬಾಲಾಂಬಿಕಾ. ತಮಿಳು ಚಿತ್ರರಂಗದಲ್ಲಿ ಅತ್ತಿಗೆ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದ ನಟಿ ಈಕೆ. ಪಾಲಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಬಾಲಾಂಬಿಕಾ, ತಮಿಳು ನಟ ಎಸ್ಡಿ ಮುರಳಿ ಅವರ ತಂಗಿಯಾಗಿ ನಟಿಸಿದ್ದಾರೆ. ಆ ನಂತರ ಬಾಲಾಂಬಿಕಾ ನಾಡಿಗನ್ ಚಿತ್ರದಲ್ಲಿ ಖುಷ್ಬು ಅವರ ತಂಗಿಯಾಗಿ, ವಿಜಯಕಾಂತ್ ಅವರ ತಂಗಿಯಾಗಿ ಮತ್ತು ಸತ್ಯರಾಜ್ ಅವರ ತಂಗಿಯಾಗಿ ನಟಿಸಿದ್ದಾರೆ. ಹೀಗೆ ಸೈಡ್ ರೋಲ್ಗಳನ್ನೇ ಬಾಲಾಂಬಿಕಾ ಹೆಚ್ಚಾಗಿ ನಟಿಸಿದ್ದಾರೆ. ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ ಬಾಲಾಂಬಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗಿನ ಸಂದರ್ಶನದಲ್ಲಿ ಭಾಗಿಯಾಗಿದ್ದ ನಟಿ, ವಿಜಯ್, ಅಜಿತ್, ಕಮಲ್, ಪ್ರಶಾಂತ್ ಚಿತ್ರಗಳಿಗೆ ನಾಯಕಿ ಪಾತ್ರಕ್ಕೆ ಅವಕಾಶ ಬಂದಿತ್ತು. ಆದರೆ ಹೊಂದಾಣಿಕೆಗೆ ಒಪ್ಪದ ಕಾರಣಕ್ಕೆ ನನ್ನನ್ನು ಕೈಬಿಡಲಾಯಿತು ಎಂದು ಬಹಿರಂಗಪಡಿಸಿದ್ದಾರೆ
“ಅಡ್ಜಸ್ಟ್ ಮಾಡಿಕೊಂಡರೆ ವಿಜಯ್ ಮತ್ತು ಪ್ರಶಾಂತ್ ಜೊತೆ ನಟಿಸಬಹುದಿತ್ತು. ಅದಕ್ಕೆ ನಾನು ತಯಾರಿರಲಿಲ್ಲ. ಅಪ್ಪನೂ ಒಪ್ಪಲಿಲ್ಲ. ನಮ್ಮಪ್ಪ ಅದು ಬೇಡ ಅಂದಿದ್ರು. ಆಗ ವಿಜಯ್ ಜೊತೆ ನಟಿಸಿದ್ದರೆ, ಈಗ ನನ್ನ ಜೀವನ ಬದಲಾಗುತ್ತಿತ್ತು. ಪತಿಯೊಂದಿಗೆ ಸಂಬಂಧ ಚೆನ್ನಾಗಿರಲಿಲ್ಲ. ಹಾಗಾಗಿ ಆ ಸಂಬಂಧವನ್ನು ತಿರಸ್ಕರಿಸಿದೆ. ಈಗ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ” ಎಂದು ಬಾಲಾಂಬಿಕಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
