ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳೀ ಮಹಾಭಾರತ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಹಳ ಹಿಂದೆಯೇ ಕೇಳಿ ಬಂದಿತ್ತು. ಆದರೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಇದೀಗ ಸ್ವತಃ ಕಥೆಗಾರ ವಿಜಯೇಂದ್ರ ಪ್ರಸಾದ್ ರಾಜಮೌಳಿ ಮಹಾಭಾರತ ಸಿನಿಮಾ ಮಾಡುತ್ತಾರೆ ಎಂದು ಹೇಳುವ ಮೂಲಕ ಫ್ಯಾನ್ಸ್ ಗೆ ಗುಡ್ ನ್ಯೂಸ್ ನೀಡಿದ್ದಾರೆ.
ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಹಾಗೇ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಿಗೂ ಪ್ಯಾನ್ ಇಂಡಿಯಾ ಇಮೇಜ್ ಸಿಕ್ಕಿದೆ. ಸಿನಿಮಾದಿಂದ ಸಿನಿಮಾಗೆ ರಾಜಮೌಳಿ ರೇಂಜ್ ಬದಲಾಗುತ್ತಲೇ ಇದೆ. ಈ ಮಧ್ಯೆ ರಾಜಮೌಳಿ ಮಹಾಭಾರತ ಸಿನಿಮಾ ಮಾಡುವ ಬಗ್ಗೆನೂ ಚರ್ಚೆ ಆರಂಭ ಆಗಿದೆ. ಇತ್ತೀಚೆಗಷ್ಟೇ ತೆರೆಕಂಡಿರೋ ಪೌರಾಣಿಕ ಸಿನಿಮಾ ಆದಿಪುರುಷ್ ಫ್ಲಾಪ್ ಆಗಿದೆ. ಇದೇ ಬೆನ್ನಲ್ಲೇ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಹಾಭಾರತದ ಬಗ್ಗೆ ಕೆಲವು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ ಸಂದರ್ಶನವೊಂದರಲ್ಲಿ ‘ಮಹಾಭಾರತ’ ಸಿನಿಮಾ ಮಾಡುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ರಾಜಮೌಳಿಗೆ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ಹೆಚ್ಚು ಇಷ್ಟ. ಹಾಗಾಗಿ ಕಥೆಯಲ್ಲಿ ಹೆಚ್ಚೆಚ್ಚು ಸಾಹಸ ದೃಶ್ಯಗಳನ್ನೇ ಸೃಷ್ಟಿ ಮಾಡುತ್ತೇನೆಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಹಾಗೇ ರಾಜಮೌಳಿ ಬಯಸಿದಂತೆ ಮಹಾಭಾರತ ಸ್ಕ್ರಿಪ್ಟ್ ರೆಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಾಹುಬಲಿ ಸ್ಕ್ರಿಪ್ಟ್ ಮಾಡುವಾಗ ರಾಜಮೌಳಿ ತಂದೆ ಬಳಿ ಹೇಳಿಕೊಂಡ ಮಾತನ್ನು ನೆನಪಿಸಿಕೊಂಡಿದ್ದಾರೆ. ಬಾಹುಬಲಿ ಸ್ಕ್ರಿಪ್ಟ್ ಬರೆಯುತ್ತಿದ್ದಾಗ, ಒಂದು ರಾಜಮೌಳಿ ಬಂದು ನನ್ನ ಬಳಿ ಕೇಳಿದ್ದರು. ಅಪ್ಪ ನಾವ್ಯಾಕೆ ಈ ಸಿನಿಮಾ ಮಾಡುತ್ತಿದ್ದೇವೆ ಅಂತ ಗೊತ್ತಾ? ಅಂತ ಕೇಳಿದ್ದರು. ಆಗ ನಾನು ಯಾಕೆ ಎಂದು ಕೇಳಿದೆ. ಈ ಸಿನಿಮಾದಲ್ಲಿ ರಾಜರು, ಅರಮನೆಗಳು, ರಾಣಿಯರು, ಎದುರಾಳಿಗಳು ಹಾಗೆಯೇ ಅದ್ದೂರಿತನ ಎಲ್ಲವೂ ಇದೆ. ಈ ಸಿನಿಮಾ ಮೂಲಕ ಮುಂದಿನ ದಿನಗಳಲ್ಲಿ ನಾನು ಮಹಾಭಾರತವನ್ನು ಮಾಡಲು ಎಷ್ಟು ರೆಡಿಯಿದ್ದೇನೆ ಎಂದು ಪರೀಕ್ಷೆ ಮಾಡಿಕೊಳ್ಳಲು ಮಾಡುತ್ತಿದ್ದೇನೆ ಎಂದು ರಾಜಮೌಳಿ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.
‘ಬಾಹುಬಲಿ’ ಸಿನಿಮಾ ಮಾಡುವಾಗ ಈ ಸಿನಿಮಾ ಗೆದ್ದರೆ, ಮಹಾಭಾರತ ಸಿನಿಮಾ ಮಾಡುತ್ತೇನೆ ಎಂದು ರಾಜಮೌಳಿ ಹೇಳಿದ್ದಾಗಿ ವಿಜಯೇಂದ್ರ ಪ್ರಸಾದ್ ಸಂದರ್ಶನದಲ್ಲಿ ಹೇಳಿದ್ದಾರೆ.
