ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅವರ ಶತಕದ ನೆರವಿನಿಂದ ಆತಿಥೇಯ ಭಾರತ ವಿರುದ್ಧ ಭರ್ಜರಿ ಜಯ ದಾಖಲಿಸಿದ ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ.
ಭಾರತ ನೀಡಿದ 241 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ 43 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸುವ ಮೂಲಕ 6 ವಿಕೆಟ್ಗಳ ಅಂತರದಲ್ಲಿ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್ಗೆ ಟ್ರಾವಿಸ್ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್, ಆಸಿಸ್ಗೆ ಸುಲಭ ಗೆಲುವು ತಂದುಕೊಟ್ಟರು. ಭಾರತೀಯ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಹೆಡ್, ಅಕ್ಷರಶಃ ಅಮೋಘ ಆಟವಾಡಿದರು.
ಲಬುಶೇನ್ ಸಾಥ್
ಹೆಡ್ ಜತೆಗೆ ಮಾರ್ನಸ್ ಲಬುಶೇನ್ ಉತ್ತಮ ಸಾಥ್ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ ಅಜೇಯ 58 ರನ್ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಉಳಿದಂತೆ ಗ್ಲೇನ್ ಮ್ಯಾಕ್ಸ್ವೆಲ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.
ಆರಂಭಿಕ ಆಘಾತ
ಆರಂಭದಲ್ಲಿ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಆಸಿಸ್ ಪಡೆಗೆ ಆಘಾತ ನೀಡಿದರು. ತಂಡದ ಮೊತ್ತ 16 ರನ್ ಇದ್ದಾಗ 7 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಮೊಹಮ್ಮದ್ ಶಮಿ ಓವರ್ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ನಾನೇನು ಕಮ್ಮಿ ಎನ್ನುವಂತೆ ಮಾರಕ ಬೌಲಿಂಗ್ ದಾಳಿ ಮಾಡಿದ ಬುಮ್ರಾ, ಮಿಚೆಲ್ ಮಾರ್ಷ್ (15) ಮತ್ತು ಸ್ಟೀವ್ ಸ್ಮಿತ್ (4) ಅವರನ್ನು ಬಂದಷ್ಟೇ ವೇಗವಾಗಿ ಪೆವಿಲಿಯನ್ ಅಟ್ಟಿದರು. ಕೇವಲ 43 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಳ್ಳುವ ಮೂಲಕ ಆಸಿಸ್ ಪಡೆ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಗೆಲುವು ಭಾರತದ್ದೇ ಎಂಬ ಅಭಿಪ್ರಾಯ ಮೂಡಿಬಂದಿತ್ತು. ಆದರೆ, ಅಭಿಪ್ರಾಯವನ್ನು ಹೆಡ್ ಅಕ್ಷರಶಃ ಬದಲಾಯಿಸಿಬಿಟ್ಟರು.
ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಬಳಿಸಿದರೆ, ಶಮಿ ಒಂದು ವಿಕೆಟ್ಗೆ ತೃಪ್ತಿಪಟ್ಟುಕೊಂಡರು. ಉಳಿದಂತೆ ಯಾವೊಬ್ಬ ಬೌಲರ್ಗಳು ಕೂಡ ಆಸಿಸ್ ಬ್ಯಾಟರ್ಗಳಿಗೆ ಸವಾಲಾಗಲಿಲ್ಲ. ಸ್ಪಿನ್ನರ್ಗಳಂತೂ ತಮ್ಮ ಛಾಪು ಮೂಡಿಸಲೇ ಇಲ್ಲ. ಬ್ಯಾಟಿಂಗ್ ಮತ್ತು ಬೌಲರ್ಗಳ ವೈಫಲ್ಯವೇ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಕಾರಣ ಎಂದು ಹೇಳಬಹುದು.
ಆರನೇ ವಿಶ್ವಕಪ್ ಗೆಲುವು
ಏಕದಿನ ವಿಶ್ವಕಪ್ ಇತಿಹಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ನಲ್ಲಿ ಮುಖಾಮುಖಿಯಾಗಿದ್ದು, ಇದು ಎರಡನೇ ಬಾರಿ. 2003ರ ವಿಶ್ವಕಪ್ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ಮತ್ತೊಮ್ಮೆ ಭಾರತದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರನೇ ಬಾರಿ ವಿಶ್ವಕಪ್ ಗೆಲುವು ಸಂಭ್ರಮಿಸುತ್ತಿದೆ. 1987, 1999, 2003, 2007, 2015 ಮತ್ತು ಇದೀಗ 2023 ಅಲ್ಲಿಗೆ ಒಟ್ಟು ಆರು ಬಾರಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಂತಾಯಿತು.