ಹುಬ್ಬಳ್ಳಿ: ಭಗತ್ ಸಿಂಗ್ ಕೋಷ್ಯಾರಿ ವರದಿಯನ್ನು ಅನುಷ್ಠಾನಗೊಳಿಸಿ ಇಪಿಎಸ್ ಪಿಂಚಣಿದಾರರಿಗೆ ಅನುಕೂಲ ಮಾಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕಾರ್ಮಿಕ ಪಿಂಚಣಿ ಯೋಜನೆ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಮಹಾಮಂಡಳ ನಗರದಲ್ಲಿ ಪ್ರತಿಭಟನೆ ನಡೆಸಿದರು. ಶನಿವಾರ ಇಲ್ಲಿಯ ಲ್ಯಾಮಿಂಗ್ಟನ್ ರಸ್ತೆಯ ಚಿಟಗುಪ್ಪಿ ಆವರಣದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಚೇರಿಯ ಎದುರು ಸಮಾವೇಶಗೊಂಡ ನೂರಾರು ಪ್ರತಿಭಟನಾಕರರು ಬೇಕೆ ಬೇಕು ನ್ಯಾಯ ಬೇಕು, ಬೇಕೆ ಬೇಕು ಪಿಂಚಣಿ ಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಚಿಸಿದ ಭಗತ್ ಸಿಂಗ್ ಕೋಷ್ಯಾರಿ ನೇತೃತ್ವದ ಸಮಿತಿ ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದ ನಿವೃತ್ತ ನೌಕರರಿಗೆ ೩ ಸಾವಿರ ಪಿಂಚಣಿ ಹಾಗೂ ಪ್ರತಿ ೨ ವರ್ಷ ತುಟ್ಟಿ ಭತ್ಯೆ ನೀಡುವಂತೆ ಶಿಫಾರಸ್ ಮಾಡಿತ್ತು. ಆದರೆ ೧೦ ವರ್ಷ ಕಳೆದರೂ ವರದಿ ಜಾರಿಯಾಗಿಲ್ಲ. ಸದ್ಯ ನಿವೃತ್ತ ನೌಕರರಿಗೆ ಕೇವಲ ೧ ಸಾವಿರ ರೂ. ಪಿಂಚಣಿ ನೀಡುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣ ಭಗತ್ ಸಿಂಗ್ ಕೋಷ್ಯಾರಿ ವರದಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಪಿಂಚಣಿ ಯೋಜನೆ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಮಹಾಮಂಡಳ ಅಧ್ಯಕ್ಷ ಆರ್.ಪಿ ಕೋರಪಡೆ ಮಾತನಾಡಿ, ಭಗತ್ ಸಿಂಗ್ ಕೋಷ್ಯಾರಿ ವರದಿ ಅನುಷ್ಠಾನ ಮಾಡಬೇಕು ಕೇಂದ್ರ ಸರ್ಕಾರಕ್ಕೆ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಏನು ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ೬.೫ ಲಕ್ಷ ಜನರು ಪಿಂಚಣಿ ಪಡೆಯುವ ನೌಕರರಿದ್ದಾರೆ. ಈ ನೌಕರರ ಪಿಂಚಣಿ ಹೆಚ್ಚಿಸಿದರೆ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಆಗಲ್ಲ. ಸರ್ಕಾರಕ್ಕೆ ನಮ್ಮ ನೋವು ಮುಟ್ಟುತ್ತಿಲ್ಲ. ಪಿಂಚಣಿ ಪಡೆಯುತ್ತಿದ್ದಾರೆ ಎಂಬ ಉದ್ದೇಶದಿಂದ ನಮಗೆ ಬಿಪಿಎಲ್ ಕಾರ್ಡ್ ಸಹ ನೀಡುತ್ತಿಲ್ಲ. ಎಷ್ಟೋ ಜನ ನೌಕರರು ಬಡವರಿದ್ದು, ಅವರು ಜೀವನ ನಡೆಸುವುದು ಕಷ್ಟವಾಗಿದೆ ಎಂದರು.
ಕೇಂದ್ರ ಸಚಿವರಿಗೆ ಸಲ್ಲಿಸುವುದು ಇದು ನಮ್ಮ ಕೊನೆಯ ಮನವಿಯಾಗಿದೆ. ಆದರೆ ಹೋರಾಟ ಮುಂದುವರಿಯಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸರ್ಕಾರದ ಗಮನಕ್ಕೆ ತಂದು ಡಿ. ೨೩ರೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಹುಬ್ಬಳ್ಳಿ ಎಲ್ಲಿ ಎಲ್ಲ ನೌಕರರು ಅಮರಣ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಕೇಂದ್ರ ಸಚಿವರ ಸಹಾಯಕ ಆಪ್ತ ಮುರಳಿಧರ ಮಳಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮಹಾಮಂಡಳದ ಕಾರ್ಯದರ್ಶಿ ಎಸ್.ಎಸ್. ಮಹಾಜನ, ಖಜಾಂಚಿ ಎ.ಆರ್. ಹುನಗುಂದ, ವೈ.ರಾಮಭದ್ರಯ್ಯ, ಬಿ.ಎಲ್. ಮಂಟೂರ, ಸಿ.ಎಸ್. ಹಿರೇಮಠ, ಪಿ.ಆರ್. ಕಾಂಬಳೆ, ಜಿ.ವಿ ಮಠ, ಆರ್.ಟಿ. ತಳವಾಯಿ ಇದ್ದರು.