ತೆಲುಗು ಚಿತ್ರರಂಗದ ಹಿರಿಯ ನಟ, ರಾಜಕಾರಣಿಯೂ ಮೋಹನ್ ಬಾಬು ಹಾಗೂ ಮತ್ತವರ ಮಕ್ಕಳ ಗಲಾಟೆ ಬೀದಿಗೆ ಬಿದ್ದಿದೆ. ಗಲಾಟೆ ಬಗ್ಗೆ ವರದಿ ಮಾಡಲು ಹೋಗಿದ್ದ ವರದಿಗಾರನ ಮೇಲೂ ಮೋಹನ್ ಬಾಬು ಹಲ್ಲೆ ನಡೆಸಿದ್ದರು. ಮೋಹನ್ ಬಾಬು ವರ್ತನೆಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಸಹ ನಡೆದಿದ್ದವು. ಇದೀಗ ಮೋಹನ್ ಬಾಬು ಅವರು ಕ್ಷಮೆ ಕೇಳಿದ್ದಾರೆ.
“ನನ್ನ ಕುಟುಂಬಕ್ಕೆ ಸಂಬಂಧಿಸಿದ ಘಟನೆ ಇಷ್ಟು ದೊಡ್ಡ ವಿಷಯವಾಗಿ ಪತ್ರಕರ್ತರನ್ನು ಸಂಕಷ್ಟಕ್ಕೆ ದೂಡಿದ್ದಕ್ಕೆ ನನಗೆ ವಿಷಾದವಿದೆ. ಘಟನೆಯ ನಂತರ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದ ಕಾರಣ ನಾನು ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಅಂದು ನಡೆದ ಘಟನೆಯಲ್ಲಿ ಪತ್ರಕರ್ತರೊಬ್ಬರು ಗಾಯಗೊಂಡಿರುವುದು ತುಂಬಾ ಬೇಸರದ ಸಂಗತಿ. ನಾನು ಅವರ ಕುಟುಂಬಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮೋಹನ್ ಬಾಬು ಅವರ ಕುಟುಂಬದಲ್ಲಿ ವಿವಾದಗಳು ಭುಗಿಲೆದ್ದಿದ್ದು, ಅವರ ಕಿರಿಯ ಪುತ್ರ ಮಂಚು ಮನೋಜ್ ಹಾಗೂ ಮೋಹನ್ ಬಾಬು ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳು ನಡೆಯುತ್ತಿವೆ. ಮೋಹನ್ ಬಾಬು ಮನೆಯಲ್ಲಿ ಕೆಲ ಸಮಯದಿಂದ ವಾಸವಿದ್ದ ಮಂಚು ಮನೋಜ್ ಮೇಲೆ, ಮೋಹನ್ ಬಾಬು ಮ್ಯಾನೇಜರ್ ಹಾಗೂ ಇನ್ನೂ ಕೆಲವರು ಹಲ್ಲೆ ಮಾಡಿದ್ದರು. ಇದರ ಬಗ್ಗೆ ಮಂಚು ಮನೋಜ್ ದೂರು ನೀಡಿದ್ದರು. ಮೋಹನ್ ಬಾಬು ಸಹ ತಮ್ಮ ಪುತ್ರ ಮಂಚು ಮನೋಜ್ ಹಾಗೂ ಅವರ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದರು.
ಸೋಮವಾರ ರಾತ್ರಿ, ಮಂಚು ಮನೋಜ್, ಮೋಹನ್ ಬಾಬು ಅವರ ಮನೆಗೆ ಹೋಗಲು ಪ್ರಯತ್ನಿಸಿದಾಗ ಗೇಟ್ ಬಳಿ ಮೋಹನ್ ಬಾಬು ಅವರನ್ನು ತಡೆಯಲು ಯತ್ನಿಸಿದರು. ಆಗ ಮಂಚು ಮನೋಜ್ ಜೊತೆಗೆ ಕೆಲ ವರದಿಗಾರರು ಸಹ ಒಳಗೆ ಹೋಗಿ ಮೋಹನ್ ಬಾಬು ಅವರ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರು. ಈ ವೇಳೆ ಮೋಹನ್ ಬಾಬು ವರದಿಗಾರನ ಕೈಯಿಂದ ಮೈಕ್ ಕಿತ್ತುಕೊಂಡು ಅದರಿಂದಲೇ ಹಲ್ಲೆ ಮಾಡಿದ್ದರು.
ಘಟನೆ ಬಳಿಕ ತೆಲುಗು ವರದಿಗಾರರು ಮೋಹನ್ ಬಾಬು ಮನೆ ಎದುರು ಪ್ರತಿಭಟನೆ ನಡೆಸಿ ಮೋಹನ್ ಬಾಬು ಅನ್ನು ಬಂಧಿಸಲು ಒತ್ತಾಯಿಸಿದ್ದರು. ಆ ಬಳಿಕ ಮೋಹನ್ ಬಾಬು ಅವರ ಮತ್ತೊಬ್ಬ ಪುತ್ರ, ನಟ, ತೆಲುಗು ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಪತ್ರಿಕಾಗೋಷ್ಠಿ ನಡೆಸಿ ಎಲ್ಲ ವರದಿಗಾರರ ಕ್ಷಮೆ ಕೇಳಿದ್ದರು. ಇದೀಗ ಸ್ವತಃ ಮೋಹನ್ ಬಾಬು ಟ್ವೀಟ್ ಮಾಡುವ ಮೂಲಕ ಕ್ಷಮೆ ಕೇಳಿದ್ದಾರೆ.