ಕರುನಾಡ ರಾಜರತ್ನ, ಅಭಿಮಾನಿಗಳ ಪಾಲಿನ ಯುವರತ್ನ ಡಾ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 50ನೇ ಜನ್ಮೋತ್ಸವನ್ನು ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಅಪ್ಪು ಇಲ್ಲದ ಕೊರಗಿನಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸುತ್ತಿದ್ದಾರೆ. ಇಂದು ಮಧ್ಯರಾತ್ರಿಯಿಂದಲೇ ದೊಡ್ಮನೆ ಭಕ್ತಗಣ ಅಪ್ಪು ಪುಣ್ಯಭೂಮಿಗೆ ನಮಿಸಿದ್ದಾರೆ. ಜೊತೆಗಿರದ ಜೀವ ಎಂದೆಂದೂ ಜೀವಂತ ಎನ್ನುತ್ತಲೇ ಪುನೀತ್ ಮಾಡಿದ ಸಾಮಾಜಿಕ ಕೆಲಸಗಳನ್ನು ಅಭಿಮಾನಿಗಳು ಸ್ಮರಿಸುತ್ತಿದ್ದಾರೆ.
ಅಪ್ಪು 50ನೇ ಜನ್ಮದಿನದ ವಿಶೇಷವಾಗಿ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಮಾಧಿಯನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿದೆ. ಇಡೀ ಕುಟುಂಬ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದೆ. ದೊಡ್ಮನೆ ಹುಡ್ಗನಿಗೆ ಇಷ್ಟವಾದ ತಿನಿಸುಗಳನ್ನು ಇಟ್ಟು ಪೂಜೆ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘಣ್ಣ, ಮಂಗಳ ರಾಘವೇಂದ್ರ ರಾಜ್ಕುಮಾರ್ ಹಾಗೂ ಅಪ್ಪು ಮಕ್ಕಳು ಭಾಗಿಯಾಗಿದ್ದಾರೆ.
ಅಪ್ಪು 50ನೇ ಜನ್ಮದಿನದ ಸವಿನೆನಪಿನಲ್ಲಿ ಅಶ್ವಿನಿ
ಪುನೀತ್ ರಾಜ್ ಕುಮಾರ್ 50ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪತ್ರ ಬರೆದಿದ್ದಾರೆ. ಇಂದು ಅಪ್ಪು ಅವರು, ಅನೇಕರೊಂದಿಗೆ ಹಂಚಿಕೊಂಡ ಕ್ಷಣಗಳು ಹಾಗೂ ಆನಂದವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಎಲ್ಲರೊಂದಿಗೆ ಇಟ್ಟಿದ್ದ ಒಡನಾಟ ಮತ್ತು ನೆನಪುಗಳು ಅವರು ಪ್ರತಿಯೊಬ್ಬರಿಗೂ ಎಷ್ಟು ಅರ್ಥಪೂರ್ಣರು ಎಂಬುದನ್ನು ತೋರಿಸುತ್ತದೆ. ಜೀವನದಲ್ಲಿ ಮತ್ತು ಪರದೆಯ ಮೇಲೆ ಅವರು ನಿರ್ವಹಿಸಿದ ಎಲ್ಲಾ ಪಾತ್ರಗಳಲ್ಲಿ ಅವರು ಅಳಿಸಲಾಗದ ಪ್ರಭಾವ ನಮಗೆ ಎಂದೆಂದಿಗೂ ಸ್ಫೂರ್ತಿಯಾಗಿರುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
ಮೈಸೂರಿನಲ್ಲಿ ಮೂಡಿತು ಅಪ್ಪು ರಂಗೋಲಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಅಪ್ಪುವನ್ನು ವಿಶೇಷವಾಗಿ ಸ್ಮರಿಸಲಾಗಿದೆ. ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಅಪ್ಪು ಭಾವ ಚಿತ್ರ ಅರಳಿದೆ. 135 ಅಡಿ ಉದ್ದ,60 ಅಡಿ ಅಗಲ 8100 ಚದರ ಅಡಿಗಳ ಬೃಹತ್ ಚಿತ್ರ ಇದಾಗಿದ್ದು,ರಾಜಕುಮಾರ ಚಿತ್ರದ ಈ ಭಾವ ಚಿತ್ರವನ್ನು 5 ಜನ ಕಲಾವಿದರು ಸತತ 7 ಗಂಟೆಗಳ ಕಾಲ ಕುಳಿತು ರಂಗೋಲಿ ಮೂಲಕ ಬಿಡಿಸಿದ್ದಾರೆ.