ಬೆಳಗಾವಿ:– ಮುಸ್ಲಿಮರಿಗೆ ಸಂಪತ್ತು ಹಂಚುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಸಂಪತ್ತು ಇದ್ದರೆ ಹಂಚಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ. ಟಿಪ್ಪು ಅಂದರೆ ಸಿದ್ದರಾಮಯ್ಯನವರಿಗೆ ಬಹಳ ಪ್ರೀತಿ.
ಅವರ ಹೇಳಿಕೆ ದೇಶ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಟಿಪ್ಪು ಮೇಲೆ ಅತಿಯಾದ ಪ್ರೀತಿ ತೋರಿಸಿ ಹಿಂದೆ ಏನಾಯ್ತು? ಎಂಬುದನ್ನು ಅವರು ಮನಗಾಣಬೇಕು ಎಂದು ಟೀಕಿಸಿದರು.
ಹಿಂದೂಗಳನ್ನ ಎರಡನೇ ದರ್ಜೆಯ ಪ್ರಜೆಗಳ ರೀತಿ ನೋಡುತ್ತಿದ್ದಾರೆ. ಎಲ್ಲರಿಗೂ ಸಮಾನತೆ ಇರಬೇಕು. ಟಿಪ್ಪು ಜಯಂತಿ, ಶಾದಿ ಭಾಗ್ಯ, ಮುಸ್ಲಿಂ ವಿವಾಹಕ್ಕೆ ಧನ ಸಹಾಯ ಈ ರೀತಿ ಕಾರ್ಯಕ್ರಮಗಳನ್ನ ತಂದರು. ಮುಸ್ಲಿಂಮರನ್ನ ವೋಟಿನ ಗಾಳವಾಗಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಬಿಜೆಪಿ ಕಾರ್ಯಕರ್ತನ ಮೇಲೆ ಚಾಕು ಇರಿತ ಪ್ರಕರಣ ಕುರಿತು ಮಾತನಾಡಿದ ಅಶೋಕ್, ನಾನು ಸಂಜೆ ಪೃಥ್ವಿರಾಜ್ ಅವರನ್ನು ಭೇಟಿಯಾಗುತ್ತೇನೆ. ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದು ಪಕ್ಕಾ ಇದೆ ಎಂದು ಆರೋಪಿಸಿದರು.