ಬೆಂಗಳೂರು:ಇಂದಿರಾ ನಗರದಲ್ಲಿ 2 ಕೋಟಿ ಮೌಲ್ಯದ ವಾಚ್ ಕದ್ದು ಪರಾರಿ ಆಗಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಓಸಿ ಅಖ್ತರ್ ಬಂಧಿತ ಆರೋಪಿ ಆಗಿದ್ದು, ಈತನಿಂದ 129 ರಾಡೋ ವಾಚ್, 29 ಲಾಂಜಿನ್, 13 ಒಮೇಗಾ ವಾಚ್ ಸೇರಿ ಎರಡು ಕೋಟಿ ಮೌಲ್ಯದ ವಾಚ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದಿರಾನಗರದ 100 ಫಿಟ್ ರಸ್ತೆಯಲ್ಲಿ ಶಾಮೋಯಿಲ್ ಎಂಬುವರು ಹಲವು ವರ್ಷಗಳಿಂದ ಸಿಮನ್ಸ್ ಟೈಮ್ಸ್ ಶಾಪ್ ಹೆಸರಿನಲ್ಲಿ ದುಬಾರಿ ಮೌಲ್ಯದ ವಾಚ್ಗಳನ್ನು ಮಾರಾಟ ಮಾಡುತ್ತಿದ್ದರು. ಇದೇ ತಿಂಗಳ 4 ರಂದು ಅಂಗಡಿಗೆ ನುಗ್ಗಿದ್ದ ಅಖ್ತರ್ ರೋಲಿಂಗ್ ಶಟರ್ ಮುರಿದು ವಾಚ್ ದೋಚಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
