ಉಡುಪಿ: ಒಂದು ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಹಗರಣದ ಆರೋಪ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ದಾಖಲೆಗಳ ಜೊತೆ ತಿರುಗೇಟು ಕೊಟ್ಟಿದ್ದಾರೆ. ಉಡುಪಿ ಜಿಲ್ಲೆಯ ಪರಶುರಾಮ ಥೀಮ್ ಪಾರ್ಕ್ ಗಲಾಟೆ ತಾರಕಕ್ಕೇರಿದೆ. ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ್ ಬಂಧನ ಬೆನ್ನಲ್ಲೇ ಮತ್ತೊಮ್ಮೆ ವಿವಾದ ಸ್ಫೋಟವಾಗಿದೆ.
ಕಾಂಗ್ರೆಸ್ ಬಿಜೆಪಿ ರಾಜಕೀಯ ಕಚ್ಚಾಟಕ್ಕೆ ಬಲಿಯಾದ ಕಲಾವಿದನ ಪರವಾಗಿ ಸುನಿಲ್ ಕುಮಾರ್ ಮಾತನಾಡಿದ್ದಾರೆ. ಮೊದಲ ಬಾರಿಗೆ ಸಂಪೂರ್ಣ ದಾಖಲೆಯೊಂದಿಗೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಕಲಾವಿದ ಕೃಷ್ಣ ನಾಯ್ಕ್ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದು ರಾಜಕೀಯ ದ್ವೇಷ ಮತ್ತು ಸೋಲಿನ ಹತಾಶೆಯೇ ಕಾರಣ ಎಂದಿದ್ದಾರೆ.
ಒಟ್ಟು 14 ಕೋಟಿ ರೂ. ವೆಚ್ಚದ ಕಾರ್ಕಳ ಥೀಂ ಪಾರ್ಕ್ಗೆ 4.50 ಕೋಟಿ ರೂ. ಹಣ ಮಂಜೂರಾದರೂ ಸರಕಾರ ಬಿಡುಗಡೆ ಮಾಡಲಿಲ್ಲ. ಶಿಲ್ಪಿ ಮೂರ್ತಿಯ ವಿನ್ಯಾಸ ಬದಲಿಸಲು ಅನುಮತಿ ಪಡೆದು ಮೂರ್ತಿ ತೆರವು ಪ್ರಕ್ರಿಯೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು, ಕೋರ್ಟ್ ಸೂಚನೆ ಕೊಟ್ಟರು ಕಾಮಗಾರಿ ಬಿಡುತ್ತಿಲ್ಲವಂತೆ. ಸರ್ಕಾರದ ಯೋಜನೆ ಹಸ್ತಾಂತರ ಮೊದಲೇ ತನಿಖೆ ಮಾಡುವ ಪರಂಪರೆ ಉಡುಪಿಯಲ್ಲಿ ಶುರುವಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.