ದಿವಂಗತ ನಟ ಪುನೀತ್ ಸ್ಮರಣಾರ್ಥವಾಗಿ ಇಂದು ಅಪ್ಪು ಸಮಾಧಿಯಲ್ಲಿ ನಾರಾಯಣ ನೇತ್ರಾಲಯದಿಂದ ನೇತ್ರದಾನ ನೋಂದಣಿ ಸಂಖ್ಯೆಯನ್ನು ಬಿಡುಗಡೆಗೊಳಿಸಲಾಗಿದೆ. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯರಾದ ಡಾ. ಭುಜಂಗ ಶೆಟ್ಟಿ, ಅಪ್ಪು ಸಮಾಧಿಯ ಬಳಿ ಶ್ರೇಷ್ಟ ಕೆಲಸ ಶುರುವಾಗಿದ್ದು, ಅಪ್ಪು ಕಣ್ಣುಗಳು ನಾಲ್ಕು ಜನರಿಗೆ ದೃಷ್ಟಿಕೊಟ್ಟಿದೆ. ಪುನೀತ್ ನಮ್ಮನ್ನೆಲ್ಲಾ ಅಗಲಿ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟು ಹೋಗಿದ್ದಾರೆ. ಇನ್ನೂ ಅಪ್ಪು ಕಣ್ಣು ಕೊಟ್ಟ ಮೇಲೆ ನೇತ್ರದಾನದ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, 440 ಕಣ್ಣುಗಳನ್ನು ಪಡೆದಿದ್ದೇವೆ. ನನಗೆ ಸುಮಾರು ಜನ ಕರೆ ಮಾಡಿ ನೇತ್ರದಾನ ಮಾಡುತ್ತೀವಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ನಾವು ಬ್ರಾಂಡ್ ಅಂಬಸಿಡರ್ ಆಗಬೇಕು. ಸಂಗ್ರಹ ಆಗುವ ಕಣ್ಣುಗಳನ್ನು ವಿಶ್ವಕ್ಕೆ ಹಂಚಬಹುದು. ನಾವು ಯಾವತ್ತು ಇಹ ಲೋಕ ತ್ಯಜಿಸುತ್ತೇವೆ ಗೊತ್ತಿಲ್ಲ. ಆದರೆ ಹೋಗುವ ಮುನ್ನ ನಮ್ಮ ಕಣ್ಣುಗಳನ್ನು ದಾನ ಮಾಡುವುದು ಪುಣ್ಯದ ಕೆಲಸ ಎಂದು ಡಾ. ಭುಜಂಗಶೆಟ್ಟಿ ಹೇಳಿದರು. ಹಾಗೂ ನೇತ್ರದಾನ ನೋಂದಣಿ ಸಂಖ್ಯೆಯ ಬಗ್ಗೆ ಮಾಹಿತಿ ನೀಡಿದ್ದರು.
