ಬೆಂಗಳೂರು:- 11 ಸಾವಿರ ಗ್ರಾಮ ಪಂಚಾಯಿತಿ ನೌಕರರ ಸೇವಾ ಭದ್ರತೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಿಯುಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಕಡಿಮೆ ಅವಧಿಯಲ್ಲಿ ಹಂತ ಹಂತವಾಗಿ ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿಗಾಗಿ ತಮ್ಮ ಸರ್ಕಾರ ಹಲವಾರು ಸೌಲಭ್ಯಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರಲ್ಲದೆ ಸುಮಾರು 11,000 ಮಂದಿ ಗ್ರಾಮ ಪಂಚಾಯಿತಿ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮೂಲವೇತನ, ವಿಶ್ರಾಂತಿ ವೇತನ, ಆರೋಗ್ಯ ಭತ್ಯೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನೌಕರರ ಸಂಘದ ಪದಾಧಿಕಾರಿಗಳು ಸಲ್ಲಿಸಿದ ಬೇಡಿಕೆಯನ್ನು ಪರಿಶೀಲಿಸುವ ಭರವಸೆಯನ್ನು ಸಚಿವರು ನೀಡಿದರು.