ಮಂಡ್ಯ :- ಪೊಲೀಸರೆಂದರೆ ಜನರಿಗೆ ಗೌರವಕ್ಕಿಂತ ಜಾಸ್ತಿ ಭಯವೇ. ಜನ ಪೊಲೀಸರನ್ನು ನೋಡಿದ ಕೂಡಲೇ ಸ್ಥಳದಿಂದ ಕಾಲ್ಕಿಳಲು ಪ್ರಯತ್ನಿಸುತ್ತಾರೆ. ಇದಕ್ಕೆ ಕಾರಣ ಕೆಲವು ಪೊಲೀಸರ ದುರ್ವರ್ತನೆ. ಆದರೆ, ಈಗ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೊದಲಿನಂತಿಲ್ಲ. ಪೊಲೀಸರು ಕೂಡ ತಮಗೂ ಮನವೀಯತೆ ಇದೇ ಎಂಬುದನ್ನು ಹಲವು ಸಂದರ್ಭಗಳಲ್ಲಿ ತೋರಿಸಿಕೊಟ್ಟಿದ್ದಾರೆ.
ಇದಕ್ಕೆ ಮತ್ತಷ್ಟು ಪುಷ್ಟಿ ಎಂಬಂತೆ ಮಂಡ್ಯ ಜಿಲ್ಲೆಯ
ಪೊಲೀಸ್ ಪೇದೆಯೊಬ್ಬರು ಬುದ್ದಿ ಮಾಂದ್ಯತೆಯಿಂದ ಹುಚ್ಚುಚ್ಚಾಗಿ ತಿರುಗುತ್ತಿದ್ದ ಯುವಕನನ್ನು ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಊಟ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೋಲೀಸ್ ಠಾಣೆಯ ಅಪರಾಧ ವಿಭಾಗದ ಹೆಡ್ ಕಾನ್ಸ್ಟೇಬಲ್ ಪ್ರಭುಸ್ವಾಮಿ ಎಂಬುವವರೇ ಹೀಗೆ ಮಾನವೀಯತೆ ಮೆರೆದ ಪೊಲೀಸ್ ಆಗಿದ್ದಾರೆ.
ಹೆಡ್ ಕಾನ್ಸ್ಟೇಬಲ್ ಪ್ರಭುಸ್ವಾಮಿ ಮತ್ತು ಪೇದೆ ಅರುಣ್ ಕೆ.ಎಂ.ದೊಡ್ಡಿ ಪೋಲೀಸ್ ಠಾಣಾ ವ್ಯಾಪ್ತಿಯ ಹೆಚ್.ಹೊಸಹಳ್ಳಿ ಗ್ರಾಮದ ಬಳಿ ಗಸ್ತಿನಲ್ಲಿದ್ದ ವೇಳೆ ಅದೇ ಗ್ರಾಮದ ಬುದ್ದಿಮಾಂದ್ಯ ಯುವಕ ಮಹದೇವ (41) ಎಂಬುವವರನ್ನು ಗಮನಿಸಿದ್ದಾರೆ. ಈತನ ಬಗ್ಗೆ ಸ್ಥಳೀಯರನ್ನು ವಿಚಾರಣೆ ಮಾಡಿದಾಗ ಹೆಚ್.ಹೊಸಹಳ್ಳಿ ಗ್ರಾಮದ ಯುವಕನಾಗಿದ್ದು, ಈತ ಹುಟ್ಟಿನಿಂದಲೇ ಬುದ್ದಿಮಾಂದ್ಯ ಎಂಬ ಕಾರಣಕ್ಕೆ ಆತನ ಕುಟುಂಬಸ್ಥರು ಸಹ ಆತನ ಪೋಷಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ತಕ್ಷಣವೇ ಪೇದೆ ಪ್ರಭುಸ್ವಾಮಿ ಬುದ್ದಿ ಮಾಂದ್ಯ ಯುವಕನಿಗೆ ಬಿಸ್ಕೇಟ್, ಊಟ, ನೀರು ಕೊಡಿಸಿದ್ದಾರೆ. ಬಳಿಕ ಸಮಾಜ ಸೇವಕರಾದ ಹಲಗೂರಿನ ಲಿಂಗಪಟ್ಟಣ ಗ್ರಾಮದ ಮುಖ್ಯ ಶಿಕ್ಷಕ ಸುಂದ್ರಪ್ಪ ಮತ್ತು ಕ್ಷೌರಿಕ ನಾಗರಾಜ್ ಅವರನ್ನು ಕರೆಸಿಕೊಂಡಿದ್ದಾರೆ. ನಂತರ ತಲೆ ಕೂದಲು ತೆಗೆಯಲು ಮುಂದಾದ ವೇಳೆ ಕೆಲಕಾಲ ವಿರೋಧ ಮಾಡಿದ್ದಾನೆ. ಆದರೆ, ಎಸ್.ಐ.ಹಾಗಲಹಳ್ಳಿ ಮತ್ತು ಹೆಚ್.ಹೊಸಹಳ್ಳಿ ಗ್ರಾಮದ ಸಾರ್ವಜನಿಕರ ಸಹಾಯದೊಂದಿಗೆ ತಲೆ ಕೂದಲನ್ನು ತೆಗೆದು, ನಾಲೆಯಲ್ಲಿ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಊಟ ಮಾಡಿಸಿದ ನಂತರ ಅವರ ಸಂಬಂಧಿಕರೊಂದಿಗೆ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.
ಹೀಗೆ ಒಂದಿಲ್ಲೊಂದು ಸಮಾಜಸೇವೆಯಲ್ಲಿ ತೊಡಗುವ ಪ್ರಭುಸ್ವಾಮಿ ಪರಿಸರ ಸಂರಕ್ಷಣೆಯಲ್ಲಿ ಸದಾ ಮುಂದು. ಈಗಾಗಲೇ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಗಿಡ ನೆಡು – ಮರ ಮಾಡು ಎಂಬ ಆಂದೋಲನದ ಅಡಿಯಲ್ಲಿ ಪ್ರಕೃತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಅದಲ್ಲದೇ ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಕಾರ್ಯಕ್ರಮ, ಬುದ್ದಿ ಮಾಂದ್ಯರನ್ನು ಮತ್ತೆ ಸಮಾಜಕ್ಕೆ ತರುವ ಕೆಲಸ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇತರೇ ಪೋಲೀಸರಿಗೆ ಮಾದರಿಯಾಗಿದ್ದಾರೆ.
ಇವರ ಸಾಮಾಜಿಕ ಸೇವೆ ಮತ್ತು ಅಪರಾಧ ಪ್ರಕರಣಗಳ ಪತ್ತೆ ಕಾರ್ಯದ ವೈಖರಿಯನ್ನು ಗಮನಿಸಿದ ಇವರ ಮೇಲಾಧಿಕಾರಿಗಳು 2022 ರ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಚಿನ್ನದ ಪದಕ ದೊರೆತಿದೆ.
ಇವರ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರು ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಇಲಾಖೆಯ ಮೇಲಾಧಿಕಾರಿಗಳು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ
