ಬೆಂಗಳೂರು:– ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮೊದಲ ಪಟ್ಟಿಯಲ್ಲಿ ಫಸ್ಟ್ ಟೈಂ ಶಾಸಕರಾದವರಿಗೆ ಅವಕಾಶ ನೀಡಿಲ್ಲ. ಮುಂದಿನ ಪಟ್ಟಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲು ತೀರ್ಮಾನವಾಗಿದೆ. ನಿಗಮ ಮಂಡಳಿ ನೇಮಕಾತಿ, ಕಾರ್ಯಕರ್ತರಿಗೂ ಅವಕಾಶ ನೀಡುವ ಸಂಬಂಧ ನಾನು ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಮಾತನಾಡಿದ್ದೇವೆ. ನಾವು ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ನೀಡಿದ್ದು, ಅವರು ಅದನ್ನು ದೆಹಲಿಗೆ ತೆಗದುಕೊಂಡು ಹೋಗಿದ್ದಾರೆ.
ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದ ನಂತರ ಹೈಕಮಾಂಡ್ ನಾಯಕರು ನಮ್ಮ ಪಟ್ಟಿ ಪರಿಶೀಲಿಸಿ ಎರಡ್ಮೂರು ದಿನಗಳಲ್ಲಿ ಅಂತಿಮ ಪಟ್ಟಿ ರವಾನಿಸುತ್ತಾರೆ. ನಾವು ನೀಡಿದ ಪಟ್ಟಿಯನ್ನು ಪಕ್ಷದ ಹೈಕಮಾಂಡ್ ಪರಿಶೀಲಿಸಬೇಕು. ಏಕೆಂದರೆ ಚುನಾವಣೆ ಹೊತ್ತಿನಲ್ಲಿ ಒಂದಿಷ್ಟು ಮಾತುಗಳನ್ನು ಕೊಟ್ಟಿರುತ್ತಾರೆ. ಹೈಕಮಾಂಡ್ ಯಾರಿಗೆ ಏನು ಸೂಚನೆ ನೀಡಿತ್ತೋ ಅದರ ಪ್ರಕಾರ ಅಂತಿಮ ಪಟ್ಟಿ ಸಿದ್ಧವಾಗಲಿದೆ ಎಂದು ತಿಳಿಸಿದರು.
ಬಿ.ಆರ್. ಪಾಟೀಲ್ ಅವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಪತ್ರ ಬರೆದಿರುವ ವಿಚಾರ ತಿಳಿದಿಲ್ಲ. ಅದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ. ಮಾಹಿತಿ ಗೊತ್ತಿಲ್ಲದೇ ಮಾತನಾಡಲು ನನಗೆ ಇಷ್ಟವಿಲ್ಲ. ಯಾವುದೇ ಶಾಸಕರಾಗಲಿ ಮಾತನಾಡಲು, ದನಿ ಎತ್ತಲು ಅವಕಾಶವಿದೆ. ಸದನದಲ್ಲಿ ಮಾತನಾಡುವಾಗ ತನಿಖೆಯಾಗಲಿ ಎಂದು ಹೇಳಿರಬಹುದು.
ಕಂದಾಯ ಸಚಿವ ಕೃಷ್ಣಬೈರೇಗೌಡರು ಈಗಾಗಲೇ ತನಿಖೆ ಮಾಡಲು ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ, ತನಿಖೆಗಳು ನಡೆಯುತ್ತಿರುವ ವಿಚಾರ ನನಗೂ ಗೊತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ. ಬಿ.ಆರ್.ಪಾಟೀಲ್ ಅವರನ್ನು ಕರೆದು ಖಂಡಿತಾ ಮಾತನಾಡುವೆ ಎಂದು ಸ್ಪಷ್ಟಪಡಿಸಿದರು.