ಹುಬ್ಬಳ್ಳಿ: ಅಮರಗೋಳದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಿರುವ ‘ಭಾನುವಾರ ಮಾರುಕಟ್ಟೆ’ ಇನ್ನೂ ಬಳಕೆಯಾಗುತ್ತಿಲ್ಲ. ರೈತರು ತಾವು ಬೆಳೆದ ಬೆಳೆಗಳನ್ನು ಪ್ರತಿ ಭಾನುವಾರ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಇಲ್ಲಿ ಅವಕಾಶ ನೀಡಲು ಯೋಜಿಸಲಾಗಿತ್ತು. ಆದರೆ, ರೈತರು ಆಸಕ್ತಿ ತೋರದ ಕಾರಣ ಮಾರುಕಟ್ಟೆಯನ್ನು ಬಾಡಿಗೆಗೆ ನೀಡಲು ಎಪಿಎಂಸಿ ಇದೀಗ ಸಿದ್ಧತೆ ನಡೆಸಿದೆ
2017ರಲ್ಲಿ ಸಾಲಿನಲ್ಲಿ ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಮಾರುಕಟ್ಟೆಯಲ್ಲಿ 14 ಮಳಿಗೆಗಳು, ಎರಡು ಹರಾಜು ಕಟ್ಟೆ, ರೈತರ ವಿಶ್ರಾಂತಿ ಸ್ಥಳ ಹಾಗೂ ಕಚೇರಿ ಇದೆ. ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಬಿಆರ್‌ಟಿಎಸ್ ಬಸ್ ನಿಲ್ದಾಣದ ಎದುರಿಗೆ ಇರುವ ಈ ಸ್ಥಳ, ಐದು ವರ್ಷಗಳಿಂದ ಸರಿಯಾಗಿ ಬಳಕೆಯಾಗದೇ ಪಾಳು ಬಿದ್ದಿದೆ.

‘ಧಾರವಾಡ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಮಾರುಕಟ್ಟೆಯು ವ್ಯಾಪಾರಕ್ಕೆ ಪ್ರಶಸ್ತ ಸ್ಥಳವಾಗಿದೆ. ಹೂ, ಹಣ್ಣು, ತರಕಾರಿ, ಕಾಳು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರು ಈ ಜಾಗದ ಪ್ರಯೋಜನ ಪಡೆಯಬಹುದು ಎಂದು ಅಂದುಕೊಂಡಿದ್ದೆವು. ಈ ಕುರಿತು ಹೆಚ್ಚಿನ ಪ್ರಚಾರ ಕೂಡ ಮಾಡಿದ್ದೆವು’ ಎಂದು ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ಅನಿಲಕುಮಾರ ತಿಳಿಸಿದ್ದಾರೆ.
ಸಮಿತಿ ತೀರ್ಮಾನ: ‘ಮಳಿಗೆಗಳನ್ನು ಬಳಸಿಕೊಳ್ಳಲು ರೈತ ಬೆಳೆಗಾರರ ಸಂಘದವರಿಗೂ ತಿಳಿಸಲಾಗಿತ್ತು. ವಾರವಿಡೀ ಬಳಕೆಗೂ ಅವಕಾಶ ನೀಡಲಾಗಿತ್ತು. ಆರಂಭದಲ್ಲಿ ಕೆಲವು ಬೆಳೆಗಾರರು ಉತ್ಸಾಹ ತೋರಿದರು. ಬಳಿಕ ಗ್ರಾಹಕರೇ ಬರುತ್ತಿಲ್ಲ ಎಂದು ಅಲ್ಲಿಗೆ ವ್ಯಾಪಾರಕ್ಕೆ ಬರುವುದನ್ನೇ ಬಿಟ್ಟರು. ಹೀಗಾಗಿ, ಎಪಿಎಂಸಿ ಸಮಿತಿಯು ಆ ಜಾಗ ಬಾಡಿಗೆ ನೀಡಲು ತೀರ್ಮಾನಿಸಿ ಪ್ರಸ್ತಾವ ಕಳಿಸಿತ್ತು. ಅದಕ್ಕೆ ನಿರ್ದೇಶಕರಿಂದ ಒಪ್ಪಿಗೆ ಸಿಕ್ಕಿದೆ’ ಎಂದು ಹೇಳಿದರು.
‘ಮಳಿಗೆಗಳು ಸೇರಿದಂತೆ ವಿವಿಧ ಸ್ಥಳಗಳನ್ನು ಮೌಲ್ಯಮಾಪನ ಮಾಡಿ ಬಾಡಿಗೆ ನಿಗದಿಪಡಿಸಿ, ಟೆಂಡರ್ ಕರೆಯಲಾಗುವುದು. ವ್ಯಕ್ತಿಗಳು ಅಥವಾ ಸಂಘ–ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಈ ರೀತಿಯಾದರೂ ಆ ಸ್ಥಳ ಬಳಕೆಯಾಗುವುದರಿಂದ, ಎಪಿಎಂಸಿಗೂ ಬಾಡಿಗೆ ರೂಪದಲ್ಲಿ ಆದಾಯ ಬರಲಿದೆ’ ಎಂದರು.
ಗ್ರಾಹಕರೇ ಸುಳಿಯುವುದಿಲ್ಲ: ‘ಭಾನುವಾರ ಮಾರುಕಟ್ಟೆಯು ರಸ್ತೆ ಬದಿ ಇದ್ದರೂ, ಜನವಸತಿ ಪ್ರದೇಶ ಅಲ್ಲದಿರುವುದರಿಂದ ಅಲ್ಲಿಗೆ ಖರೀದಿಗಾಗಿ ಬರುವುದು ಕಡಿಮೆ. ನಗರದ ಬಹುತೇಕ ಪ್ರದೇಶಗಳಲ್ಲಿ ವಾರದ ಸಂತೆಗಳು ನಡೆಯುತ್ತವೆ. ಅಲ್ಲಿಗೂ ರೈತರೇ ಹೆಚ್ಚಾಗಿ ವ್ಯಾಪಾರಕ್ಕೆ ಬರುವುದರಿಂದ ಜನರು ತಮಗೆ ಬೇಕಾದ್ದನ್ನೆಲ್ಲ ಅಲ್ಲೇ ಖರೀದಿಸುತ್ತಾರೆ. ಭಾನುವಾರ ಮಾರುಕಟ್ಟೆಯಲ್ಲಿಅಂತಹ ವಿಶೇಷ ಏನಿರುವುದಿಲ್ಲ ಅಂದುಕೊಂಡು ಜನ ಅತ್ತ ಸುಳಿಯುವುದೇ ಇಲ್ಲ’ ಎಂದು ರೈತ ಈಶ್ವರ ಪಾಟೀಲ ಅಭಿಪ್ರಾಯಪಟ್ಟರು.
ವರದಿ: ಕಲ್ಮೇಶ್
