ಬೆಂಗಳೂರು:- ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಇನ್ನು ಎರಡು – ಮೂರು ದಿನಗಳ ಕಾಲ ಉಷ್ಣಾಂಶವು ಸಾಮಾನ್ಯಕ್ಕಿಂತ 3ರಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳ ಆಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನಲ್ಲಿ 1.5 ಡಿಗ್ರಿ ಸೆಲ್ಸಿಯಸ್ನಿಂದ 3 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರಲ್ಲಿ ರಾತ್ರಿ ಚಳಿ
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಬಿಸಿಲಿನ ವಾತಾವರಣ ಇರಲಿದೆ. ಸಂಜೆಯಾಗುತ್ತಿದ್ದಂತೆ ಗಾಳಿಯು ವೇಗವನ್ನು ಪಡೆದುಕೊಳ್ಳಲಿದೆ. ಅಲ್ಲದೆ, ರಾತ್ರಿ ವೇಳೆ ಚಳಿ ಚಳಿಯಾಗಲಿದೆ. ಬುಧವಾರ ಮುಂಜಾನೆ ಕೆಲವು ಕಡೆ ದಟ್ಟ ಮಂಜು ಆವರಿಸಿತ್ತು. ಗುರುವಾರ (ಜನವರಿ 18) ಸಹ ಹಲವು ಕಡೆ ಚಳಿ ಇರಲಿದೆ ಎಂದು ಹೇಳಲಾಗಿದೆ. ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 16 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನಂತೆ ಚಳಿಯೂ ಹೆಚ್ಚು
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬೆಳಗ್ಗೆ ಹೊತ್ತು ಬಿಸಿಲು ಹೇಗಿರಲಿದೆಯೋ? ರಾತ್ರಿಯಾಗುತ್ತಿದ್ದಂತೆ ಚಳಿಯೂ ಹಾಗೆಯೇ ಇರಲಿದೆ. ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಹುತೇಕ ಇನ್ನೈದು ದಿನ 22 ಡಿಗ್ರಿ ಸೆಲ್ಸಿಯಸ್ನಲ್ಲಿಯೇ ಇರಲಿದೆ. ಹೀಗಾಗಿ ಈ ಭಾಗದಲ್ಲಿ ಶುಷ್ಕ ವಾತಾವರಣ ಇರಲಿದೆ
ಮಲೆನಾಡಿನಲ್ಲಿ ಚಳಿ ಹೆಚ್ಚು
ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಬೆಳಗ್ಗೆ ಬಿಸಿಲಿನ ವಾತಾವರಣ ಇರಲಿದೆ. ರಾತ್ರಿ ಹಾಗೂ ಬೆಳಗಿನ ಜಾವ ಸ್ವಲ್ಪ ಚಳಿ ಜಾಸ್ತಿಯೇ ಇರಲಿದೆ. ಶಿವಮೊಗ್ಗದಲ್ಲಿ ಗುರುವಾರ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ಈ ಭಾಗದಲ್ಲಿ ಚಳಿ ಹೆಚ್ಚು ಎಂದು ಹೇಳಲಾಗಿದೆ.
ಉತ್ತರ ಒಳನಾಡಿನಲ್ಲೂ ಚಳಿ
ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಜತೆಗೆ ಚಳಿಯೂ ಇರಲಿದೆ. ಬೆಳಗಾವಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಜನವರಿ 23ರವರೆಗೆ ಕನಿಷ್ಠ ಉಷ್ಣಾಂಶವು ಇದೇ ರೀತಿ ಇರುತ್ತದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.