ಬೆಂಗಳೂರು: ಸಿಲಿಂಡರ್ ಸ್ಪೋಟವಾಗಿ ಹೋಟೆಲ್ ಒಂದರಲ್ಲಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಚಂದ್ರ ಲೇಔಟ್ ನ ಸಂತೃಪ್ತಿ ಉತ್ತರ ಕನ್ನಡ ಜವಾರಿ ಊಟದ ಮನೆಯಲ್ಲಿ ಇಂದು ಬೆಳಿಗ್ಗೆ ಸುಮಾರು 9.45 ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿ ಈ ಹೋಟೆಲ್ ಇದ್ದು, ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಹೋಟೆಲ್ ಮಾಲೀಕ ಮಹೇಶ್ ಹೊರತುಪಡಿಸಿ ಯಾವುದೇ ಸಿಬ್ಬಂದಿ ಇರಲಿಲ್ಲ ಎಂದು ಹೇಳಲಾಗಿದೆ. ಸದ್ಯ ಹೋಟೆಲ್ ಮಾಲೀಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೇ ಸ್ಥಳಕ್ಕೆ ಚಂದ್ರ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
