ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಹೇಳಿಕೆ ನೀಡಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಅನಂತ್ ಕುಮಾರ್ ಹೆಗ್ಡೆ ಅವನೊಬ್ಬ ಹುಚ್ಚ ಎಂದು ಏರು ಧ್ವನಿಯಲ್ಲಿ ಮಾಜಿ ಸಚಿವ ಹೆಚ್ ಆಂಜನೇಯ ಕಿಡಿಕಾರಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗಷ್ಟೇ ಸಿಎಂ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದ ಅನಂತಕುಮಾರ್ ಹೆಗಡೆ ಬಗ್ಗೆ ಮಾತಾಡಿದರು.
ಅನಂತ ಕುಮಾರ್ ಒಬ್ಬ ಹುಚ್ಚ. ಹುಚ್ಚರ ಬಗ್ಗೆ ಯಾರಾದರೂ ಮಾತಾಡ್ತಾರಾ?. ಅವನ ಬಗ್ಗೆ ಮಾತಾಡಲ್ಲ. ಅವನ ಬಗ್ಗೆ ಮಾತಾಡಿ ದೊಡ್ಡವನನ್ನಾಗಿಸಿದಂತೆ ಆಗುತ್ತದೆ’ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ರಾಮರಾಜ್ಯದ ಕನಸು ಅನಾವರಣ ಮಾಡಿ ಕಾರ್ಯರೂಪಕ್ಕೆ ತಂದವರು. ಜನ ಮೆಚ್ಚಿದ ಸಿದ್ಧರಾಮಯ್ಯ ಬಗ್ಗೆ ಹಗುರವಾಗಿ ಮಾತಾಡ್ತಾನಲ್ಲ, ಅವನು ಮನುಷ್ಯನಾ ಎಂದು ಅನಂತ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದರು.
ಮುನಿಸ್ವಾಮಿ ವಿರುದ್ದವೂ ಕಿಡಿ: ಕಾಂಗ್ರೆಸ್ ಸರ್ಕಾರ ಹಿಂಧೂ ಧರ್ಮ, ಶ್ರೀರಾಮನ ವಿರೋಧಿ ಎಂಬ ಬಿಜೆಪಿ ಸಂಸದ ಮುನಿಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಹಳಷ್ಟು ಜನ ಹಿಂದೂಗಳಿರುವುದೇ ಕಾಂಗ್ರೆಸ್ ಪಕ್ಷದಲ್ಲಿ. ಹಿಂದೂ ಧರ್ಮ, ರಾಮ ಪೂಜೆ ಮಾಡುವವರು ಹೆಚ್ಚಿರುವುದು ಕಾಂಗ್ರೆಸ್ ಪಕ್ಷದಲ್ಲಿ. ರಾಮನ ಹೆಸರಿನಲ್ಲಿ ಮತಕ್ಕಾಗಿ ಮಾರ್ಕೆಂಟಿಂಗ್ ಮಾಡುವವರು ಕಾಂಗ್ರೆಸ್ಸಿಗರಲ್ಲ ಎಂದರು.
ಕೋಟ್ಯಾಂತರ ಕಾಂಗ್ರೆಸ್ಸಿಗರ ಹೃದಯದಲ್ಲಿ ರಾಮನಿದ್ದಾನೆ. ಆಂಜನೇಯನ ಹೃದಯದಲ್ಲಿ ರಾಮನಿದ್ದಂತೆ ಕಾಂಗ್ರೆಸ್ಸಿಗರ ಹೃದಯದಲ್ಲಿ ರಾಮ. ನಾವು ರಾಮನ ವಿರೋಧಿ ಅಲ್ಲ, ಹಿಂದೂಗಳ ವಿರೋಧಿ ಅಲ್ಲ. ಹಿಂದೂಗಳ ಪರ, ಮುಸ್ಲಿಂರ ಪರ ಎಲ್ಲಾ ಧರ್ಮಗಳ ಜನರ ಪರವಿದ್ದೇವೆ ಎಂದು ಮಾಜಿ ಸಚಿವ ಆಂಜನೇಯ ತಿಳಿಸಿದರು.