ವಾಷಿಂಗ್ಟನ್: ಅಮೆರಿಕದಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿರುವವರಿಗೆ ಟ್ರಂಪ್ ಆಡಳಿತವು ನೋಂದಣಿ ದಾಖಲೆಯನ್ನು ರಚಿಸುತ್ತದೆ ಮತ್ತು ಸ್ವಯಂ ವರದಿ ಮಾಡದವರು ದಂಡ ಅಥವಾ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ವಲಸೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಎಲ್ಲರೂ ನೋಂದಣಿ ಮಾಡಿಕೊಳ್ಳಬೇಕು ಮತ್ತು ಬೆರಳಚ್ಚು, ವಿಳಾಸಗಳನ್ನು ಒದಗಿಸಬೇಕು. ಇದಕ್ಕೆ ವಿಫಲವಾದರೆ ಬಂಧನ, ದಂಡ ಅಥವಾ ಎರಡೂ ಅನ್ವಯವಾಗುತ್ತದೆ. ಹಲವು ದಶಕಗಳಿಂದ ಈ ಕಾನೂನನ್ನು ನಿರ್ಲಕ್ಷಿಸಲಾಗಿತ್ತು, ಆದರೆ ಇನ್ನು ಹಾಗಾಗುವುದಿಲ್ಲ‘ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ತಿಳಿಸಿದೆ.
14 ಮತ್ತು ಹೆಚ್ಚಿನ ವರ್ಷದವರಿಗೆ ಅನ್ವಯವಾಗುವ `ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆ‘ಯ ಒಂದು ಭಾಗವನ್ನು ಉಲ್ಲೇಖಿಸಿದೆ. ಈ ಪ್ರಕ್ರಿಯೆಯಡಿ, ಜನರು ತಮ್ಮ ಸ್ಥಳೀಯ ಅಂಚೆ ಕಚೇರಿಗೆ ಹೋಗಿ ನೋಂದಣಿ ಮಾಡಿಕೊಳ್ಳಬೇಕು. ಸಂಭಾವ್ಯ ರಾಷ್ಟ್ರೀಯ ಭದ್ರತಾ ಬೆದರಿಕೆಗಳನ್ನು ಗುರುತಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
`ದೇಶದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವವರ ಸಾಮೂಹಿಕ ಗಡೀಪಾರು ಮತ್ತು ಭವಿಷ್ಯದಲ್ಲಿ ಆಶ್ರಯ ಅನ್ವೇಷಕರಿಗೆ ಗಡಿಯನ್ನು ಮುಚ್ಚುವುದಾಗಿ‘ ಟ್ರಂಪ್ ಅವರು ಚುನಾವಣಾ ಪ್ರಚಾರದ ಸಂದರ್ಭ ನೀಡಿದ್ದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಇದೊಂದು ಹೆಜ್ಜೆ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.