ಮಂಡ್ಯದ ಗಂಡು ಅಂಬರೀಶ್ ಅವರು ಅಗಲಿ ಇಂದಿಗೆ ಐದು ವರ್ಷಗಳಾಗಿವೆ. ಅವರ ಪುಣ್ಯ ಸ್ಮರಣೆಯ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಅಂಬರೀಶ್ ಅವರ ಕುಟುಂಬ ಮತ್ತು ಅಭಿಮಾನಿಗಳು ಆಯೋಜಿಸಿದ್ದಾರೆ. ಬೆಳಗ್ಗೆ ಸುಮಲತಾ ಅಂಬರೀಶ್ (Sumalatha), ಅಭಿಷೇಕ್ ಅಂಬರೀಶ್ (Abhishek), ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವಾರು ಚಿತ್ರೋದ್ಯಮದ ಗಣ್ಯರು ಮತ್ತು ಅಂಬಿ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.
ಅಂಬಿ ಸ್ಮರಣೆ (Punyasmarane) ಕುರಿತಂತೆ ಸುಮಲತಾ ಅಂಬರೀಶ್ (Ambarish) ಅವರು ಭಾವುಕ ಪೋಸ್ಟ್ ಮಾಡಿದ್ದಾರೆ. ‘ಇರುವುದೊಂದೇ ಜೀವನ ಅದೆಷ್ಟು ವ್ಯತ್ಯಾಸವಿದೆ. ಎಂದೆಂದಿಗೂ ನಮ್ಮ ನೆನಪುಗಳಲ್ಲಿ, ಸುಖ, ದುಃಖ, ನಗು, ಕಣ್ಣೀರು. ಪ್ರತಿಯೊಂದು ಕ್ಷಣವೂ ನೀವು ಬಿಟ್ಟ ನಿರ್ವಾತವನ್ನು ಅಳೆಯಲಾಗದು.ನಾನು ಆ ಪ್ರೀತಿಯನ್ನು ಕಾಪಿಟ್ಟುಕೊಳ್ಳುತ್ತೇನೆ, ನಷ್ಟವನ್ನಲ್ಲ. ಅನೇಕರನ್ನು ಒಳಗೊಂಡ ಜೀವನವನ್ನು ಎಂದಿಗೂ ಕಳೆದುಕೊಳ್ಳಲು ಆಗುವುದಿಲ್ಲ. ನೀವು ಶಾಶ್ವತವಾಗಿರುತ್ತೀರಿ.ನೀವೊಂದು ಜೀವ ಮೀರಿದ, ಒಂದು ಪ್ರಪಂಚ. ಇಂದು ನನಗೆ ಖಾತ್ರಿಯಿದೆ, ನೀವು ಅತ್ಯಂತ ಹೆಮ್ಮೆಯಿಂದ ಸಂಭ್ರಮದಲ್ಲಿರುವಿರಿ ಮತ್ತು ನಿಮ್ಮ ಆ ಪ್ರಪಂಚದಿಂದ ಅಭಿಷೇಕ್ ಅವರ ಚಲನಚಿತ್ರವನ್ನು ಆಶೀರ್ವದಿಸುತ್ತೀರಿ’ ಎಂದು ಬರೆದುಕೊಂಡಿದ್ದಾರೆ.
ಐದನೇ ವರ್ಷದ ಪುಣ್ಯಸ್ಮರಣೆಗೆ ಮಂಡ್ಯ ಮತ್ತು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತ್ತು ಈ ವರ್ಷ ಅಂಬರೀಶ್ ಅವರ ಹೆಸರಿನಲ್ಲಿ ಡಾ.ಅಂಬರೀಶ್ ಫೌಂಡೇಶನ್ ಕೂಡ ಶುರು ಮಾಡಲಾಗುತ್ತಿದ್ದು, ಹಲವಾರು ಜನಪರ ಕೆಲಸಗಳನ್ನು ಈ ಫೌಂಡೇಶನ್ ಮಾಡಲಿದೆ.