ಕಳೆದ ಕೆಲ ದಿನಗಳ ಹಿಂದೆ ನಟ ರಾಮ್ ಚರಣ್ ಬಗ್ಗೆ ಖ್ಯಾತ ನಟ ಅಲ್ಲು ಅರ್ಜುನ್ ತಂದೆ ನಿರ್ಮಾಪಕ ಅಲ್ಲು ಅರವಿಂದ್ ಹೇಳಿಕೆಯೊಂದನ್ನು ನೀಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ರಾಮ್ ಚರಣ್ ಫ್ಯಾನ್ಸ್ ಬಳಿ ಅಲ್ಲು ಅರವಿಂದ್ ಕ್ಷಮೆ ಕೇಳಿದ್ದಾರೆ.
ನಾಗಚೈತನ್ಯ ನಟನೆಯ ‘ತಂಡೇಲ್’ ಸಿನಿಮಾವನ್ನು ಅಲ್ಲು ಅರವಿಂದ್ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಮಾತನಾಡುವಾಗ ಅವರು ‘ಗೇಮ್ ಚೇಂಜರ್’ ಸಿನಿಮಾದ ನಿರ್ಮಾಪಕ ದಿಲ್ ರಾಜು ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು. ‘ಒಂದೇ ವಾರದ ಅಂತರದಲ್ಲಿ ದಿಲ್ ರಾಜು ಅವರು ಸೋಲು ಮತ್ತು ಗೆಲುವನ್ನು ಕಂಡಿದ್ದಾರೆ’ ಎಂದು ಹೇಳಿದ್ದರು. ಈ ಮಾತಿನ ಅರ್ಥ ಇಷ್ಟೇ. ದಿಲ್ ರಾಜು ನಿರ್ಮಾಣದ ‘ಗೇಮ್ ಚೇಂಜರ್’ ಸಿನಿಮಾ ಸೋತಿತು, ‘ಸಂಕ್ರಾಂತಿಕಿ ವಸ್ತುನಾಮ್’ ಸಿನಿಮಾ ಗೆದ್ದಿದ್ದರು.
ಆದರೆ ಈ ಮಾತನ್ನು ರಾಮ್ ಚರಣ್ ಫ್ಯಾನ್ಸ್ ಸಹಜವಾಗಿ ಸ್ವೀಕರಿಸಲಿಲ್ಲ. ‘ಗೇಮ್ ಚೇಂಜರ್’ ಚಿತ್ರದ ಸೋಲನ್ನು ಈ ರೀತಿ ಲೇವಡಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಫ್ಯಾನ್ಸ್ ಗರಂ ಆದರು. ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರವಿಂದ್ ಅವರನ್ನು ಟ್ರೋಲ್ ಮಾಡಲಾಯಿತು. ಹಾಗಾಗಿ ಈ ವಿಷಯಕ್ಕೆ ಅಲ್ಲು ಅರವಿಂದ್ ಈಗ ಸ್ಪಷ್ಟನೆ ನೀಡಿದ್ದಾರೆ. ಈ ವಿವಾದವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಕ್ಷಮೆ ಕೇಳಿದ್ದಾರೆ.
‘ಇತ್ತೀಚೆಗೆ ಹಿರಿಯ ಪತ್ರಕರ್ತರೊಬ್ಬರು ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡವಂತೆ ಸೂಚಿಸಿದರು. ಹಾಗಾಗಿ ಗೊಂದಲ ಪರಿಹರಿಸುತ್ತೇನೆ. ಕೇವಲ ಒಂದು ವಾರದಲ್ಲಿ ದಿಲ್ ರಾಜು ಏಳು-ಬೀಳು ಎರಡನ್ನೂ ಕಂಡಿದ್ದಾರೆ ಎಂಬುದನ್ನು ಹೇಳುವುದು ನನ್ನ ಮಾತಿನ ಉದ್ದೇಶ ಆಗಿತ್ತು. ಆಕಸ್ಮಿಕವಾಗಿ ನಾನು ಆ ಹೇಳಿಕೆ ನೀಡಿದೆ. ರಾಮ್ ಚರಣ್ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿದೆ ಅಂತ ಅಭಿಮಾನಿಗಳು ನನ್ನನ್ನು ಟ್ರೋಲ್ ಮಾಡಿದರು. ನನ್ನ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ. ರಾಮ್ ಚರಣ್ ಕೂಡ ನನ್ನ ಮಗನಿದ್ದಂತೆ. ನಮ್ಮ ನಡುವೆ ಉತ್ತಮ ಬಾಂಧವ್ಯ ಇದೆ. ಇದನ್ನು ಇಲ್ಲಿಗೆ ಬಿಡಿ. ನಾನು ಮಾತನಾಡಿದ್ದು ಸರಿಯಲ್ಲ ಎಂಬುದು ನನಗೆ ತಿಳಿದಿದೆ’ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.