ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಚನಹಳ್ಳಿಯ ಗ್ರಾಮಠಾಣಾ ಜಾಗವನ್ನು ಮಾಜಿ ಅಧ್ಯಕ್ಷೆ ದೀಪಿಕಾ ಅವರ ಪತಿ ರುದ್ರಮೂರ್ತಿ ಎಂಬುವರು ಪಿಡಿಒ, ಕಾರ್ಯದರ್ಶಿ ಜೊತೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಪರಾಭಾರೆ ಮಾಡಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಬಸವರಾಜ್ ಆರೋಪಿಸಿದರು.
ಸಕ್ಕರೆ ಗೊಲ್ಲಹಳ್ಳಿ ಗ್ರಾ.ಪಂ. ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸಿದ ಡಿಎಸ್ಎಸ್ ಕಾರ್ಯಕರ್ತರು ತಪ್ಪಿತಸ್ಥ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಪಂಚಾಯತಿ ವ್ಯಾಪ್ತಿಯ ಭೂಚನಹಳ್ಳಿ ಗ್ರಾಮದ ಸರ್ವೇ ನಂ.132/116ರ ಪೈಕಿ 2 ಎಕರೆ 20 ಗುಂಟೆ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿಕೊಂಡಿದ್ದಾರೆ. ಗ್ರಾಮಠಾಣಾ ಜಾಗಕ್ಕೆ ಇ-ಖಾತೆ ಮಾಡಿಕೊಟ್ಟು ಅಕ್ರಮ ಎಸಗಿದ್ದಾರೆ ಎಂದು ದೂರಿದರು.
ಮುನಿರಾಜು ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಯೋಗದೊಂದಿಗೆ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರ ಪತಿ ರುದ್ರಮೂರ್ತಿ ಒಳಗೊಂಡಂತೆ ಪಿಡಿಒ ಮುನಿರಾಜು ವಿರುದ್ಧ ತನಿಖೆ ಕೈಗೊಂಡು ಕಾನೂನು ರೀತಿಯ ಕ್ರಮ ಕೈಗೊಳ್ಳಲು ಕೋರಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಮಂಜೂರಾಗಿದ್ದ ಹಲವು ಅನುದಾನಗಳನ್ನು ದುರ್ಬಳಕೆ ಮಾಡಲಾಗಿದೆ. ಸಕ್ಕರೆ ಗೊಲ್ಲಹಳ್ಳಿ ಗ್ರಾಮದ ಪರಿಶಿಷ್ಠ ಕಾಲೋನಿಯಲ್ಲಿ ಒಳಚರಂಡಿ ಕಾಮಗಾರಿ ಕಳಪೆ ಮಾಡಲಾಗಿದ್ದು, ಕೂಡಲೇ ಗುಣಮಟ್ಟ ಪರಿಶೀಲನೆ ಆಗಬೇಕಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಕಾಳೇನಹಳ್ಳಿ ಕೆರೆಯಲ್ಲಿ ಮಣ್ಣು ಮಾರಾಟ ಮಾಡಲಾಗುತ್ತಿದೆ ಕೂಡಲೇ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ತನಿಖೆ ಕೈಗೊಂಡು ತಪ್ಪು ಮಾಡಿದವರಿಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಬಸವರಾಜು, ನೆಲಮಂಗಲ ತಾಲ್ಲೂಕು ಸಂಚಾಲಕರಾದ ಬರದಿ ಹನುಮಂತರಾಯಪ್ಪ, ಜಿಲ್ಲಾ ಸಂಚಾಲಕರಾದ ದೊಡ್ಡಯ್ಯ ಲಿಂಗಪುರ, ಜಿಲ್ಲಾ ಸಂಘಟನಾ ಸಂಚಾಲಕರಾದ ನರೇಂದ್ರ ಮೂರ್ತಿ ಮಾಡೇಶ್ವರ, ಆನಂದ್ ಸಕ್ಕರೆಗೊಲ್ಲಹಳ್ಳಿ, ಹನುಮಂತಯ್ಯ, ಹನುಮಯ್ಯ, ರಾಮು ನೇರಳೆಘಟ್ಟ , ಮಹಿಳಾ ಸಂಚಾಲಕರಾದ ಕಮಲಮ್ಮ, ನಾಗರತ್ನಮ್ಮ, ಸರಸ್ವತಿ, ರತ್ನಮ್ಮ , ಚಲವಾದಿ ಮಹಾಸಭಾ ಅಧ್ಯಕ್ಷರಾದ ಉದಯಶಂಕರ್, ಎಲ್.ಎನ್ .ಮೂರ್ತಿ ಹಾಗೂ ಸ್ಥಳಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.