ನವದೆಹಲಿ:- ಜಾತಿಗಣತಿ ವಿರೋಧಕ್ಕೆ ಎಲ್ಲ ಮೇಲ್ವರ್ಗದವರು ಒಂದಾಗಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಮಸೂದೆ ಮೇಲಿನ ಚರ್ಚೆಯ ಸಮಯದಲ್ಲಿ, ‘ಮೇಲ್ವರ್ಗದವರೆಲ್ಲಾ ಒಟ್ಟಾಗಿ ಜಾತಿ ಸಮೀಕ್ಷೆ ವರದಿಯನ್ನು ತಡೆಯುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದರು. ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲು ಎಲ್ಲಾ ಮೇಲ್ವರ್ಗದವರು ಒಟ್ಟಾಗಿ ವಿರೋಧ ಮಾಡುತ್ತಿದ್ದಾರೆ ಎಂದರು.
ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯ್ತು. ಈ ವೇಳೆ ಎದ್ದು ನಿಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ‘ಕರ್ನಾಟಕದ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಸಹ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಬಾರದು ಎಂಬ ನಿವೇದನಾ ಪತ್ರಕ್ಕೆ ಈ ಹಿಂದೆ ಸಹಿ ಹಾಕಿದ್ದರು. ಜೊತೆಗೆ ಜಾತಿ ಗಣತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದರೆ ನಾವು ವಿರೋಧಿಸುತ್ತೇವೆ ಎಂದು ಎಚ್ಚರಿಕೆ ಕೂಡಾ ನೀಡಿದ್ದರು’ ಎಂದು ತಿರುಗೇಟು ನೀಡಿದರು.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಖರ್ಗೆ, ‘ನಮ್ಮ ಉಪಮುಖ್ಯಮಂತ್ರಿಯೂ ಇದನ್ನು ವಿರೋಧಿಸಿದ್ದಾರೆ. ನೀವು ಇದನ್ನು ವಿರೋಧಿಸುತ್ತಲೇ ಇದ್ದೀರಿ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಮೇಲ್ವರ್ಗದ ಜನರು ಆಂತರಿಕವಾಗಿ ಒಂದಾಗಿದ್ದೀರಿ. ಅದರಲ್ಲಿ ನೀವು ಇದ್ದೀರಿ, ಅವರೂ ಇದ್ದಾರೆ’ ಎಂದು ಹೇಳಿದರು.