ಗಣೇಶ ಚತುರ್ಥಿಯ ಸಂದರ್ಭದಲ್ಲಿ ಅಂದರೆ ಸೆಪ್ಟೆಂಬರ್ 19, 2023ರಂದು ದೇಶದಲ್ಲಿ ಜಿಯೋ ಏರ್‌ಫೈಬರ್ ಸೇವೆ ಪ್ರಾರಂಭಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿ.ನ 46 ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿ ಅಧ್ಯಕ್ಷ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
ಜಿಯೋ ಏರ್‌ಫೈಬರ್ 5ಜಿ ನೆಟ್ವರ್ಕ್ ಮತ್ತು ಅತ್ಯಾಧುನಿಕ ವೈರ್ಲೆಸ್ ತಂತ್ರಜ್ಞಾನವನ್ನು ಬಳಸಿಕೊಂಡು ಮನೆಗಳು ಮತ್ತು ಕಚೇರಿಗಳಿಗೆ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸಲಿದೆ. ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಏರ್ ಫೈಬರ್ ಆರಂಭ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಕಂಪನಿ ಮುಖ್ಯಸ್ಥ ಮುಕೇಶ್ ಅಂಬಾನಿ, “ನಮ್ಮ ಆಪ್ಟಿಕಲ್ ಫೈಬರ್ ಸೇವೆಯಾದ ಜಿಯೋ ಫೈಬರ್ 1 ಕೋಟಿಗೂ ಹೆಚ್ಚು ಸಂಪರ್ಕಗಳನ್ನು ಹೊಂದಿದೆ. ಇನ್ನೂ ಲಕ್ಷಾಂತರ ಮನೆಗಳಿಗೆ ಬೇಡಿಕೆ ಇದ್ದು, ತಂತಿ ಮೂಲಕ ಸಂಪರ್ಕ ಕಲ್ಪಿಸುವುದು ಕಷ್ಟಕರವಾಗಿದೆ. ಈ ತೊಂದರೆಯನ್ನು ಜಿಯೋ ಏರ್ ಫೈಬರ್ ನಿವಾರಿಸುತ್ತದೆ. ಈ ಮೂಲಕ ನಾವು 20 ಕೋಟಿ ಮನೆ ಮತ್ತು ಕಚೇರಿಗಳನ್ನು ತಲುಪುವ ನಿರೀಕ್ಷೆಯಲ್ಲಿದ್ದೇವೆ. ಜಿಯೋ ಏರ್ ಫೈಬರ್ ಆರಂಭದೊಂದಿಗೆ ಜಿಯೋ ವಲಯಕ್ಕೆ ಪ್ರತಿದಿನ 1.5 ಲಕ್ಷ ಹೊಸ ಗ್ರಾಹಕರನ್ನು ಸೇರಿಸಲು ಸಾಧ್ಯವಾಗುತ್ತದೆ,” ಎಂದು ತಿಳಿಸಿದ್ದಾರೆ.
