2023ರ ಏಕದಿನ ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗಳ ಸೋಲು ಕಂಡಿದೆ. ಈ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಯುವ ವೇಗಿ ನವೀನ್ ಉಲ್ ಹಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹಷ್ಮತ್ಉಲ್ಲಾ ಶಾಹಿದಿ ಸಾರಥ್ಯದ ಅಫಘಾನಿಸ್ತಾನ ಅಜ್ಮತ್ ಉಲ್ಲಾ ಒಮರ್ಜಾಯ್ ಅವರ 97 ರನ್ ಗಳಿಂದ 244 ರನ್ ಗಳಿಸಿದ್ದರು. ಈ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ರಾಸ್ಸೆ ವಾನ್ ಡೆರ್ ದುಸೆನ್ (76* ರನ್) ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ಗಳ ಗೆಲುವು ಸಾಧಿಸಿತು. ಅಫಘಾನಿಸ್ತಾನ ಪರ ರಶೀದ್ ಖಾನ್ (37ಕ್ಕೆ2) ಹಾಗೂ ಮೊಹಮ್ಮದ್ ನಬಿ (35ಕ್ಕೆ2) ಉತ್ತಮ ಬೌಲಿಂಗ್ ಸಂಯೋಜನೆ ತೋರಿದರೂ ಅಫ್ಘಾನ್ ಸೋಲಿನೊಂದಿಗೆ ವಿಶ್ವಕಪ್ ಪಯಣ ಮುಗಿಸಿದೆ. ಪಂದ್ಯದಲ್ಲಿ ನವೀನ್ ಉಲ್ ಹಕ್ 6.3 ಓವರ್ ಗಳಲ್ಲಿ 53 ರನ್ ನೀಡಿ ವಿಕೆಟ್ ಪಡೆಯಲು ಎಡವಿದ್ದರು.
2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ನವೀನ್ ಉಲ್ ಹಕ್, 50 ಏಕದಿನ ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಪಂದ್ಯದ ಸೋಲಿನ ನಂತರ ಆಫಘಾನಿಸ್ತಾನ ಯುವ ವೇಗಿ ತಮ್ಮ ಅಧಿಕೃತ ಇನ್ಸಾಟಾಗ್ರಾಂನಲ್ಲಿ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿರುವ ಸುದ್ದಿಯನ್ನು ಸ್ಪಷ್ಟಪಡಿಸಿದ್ದಾರೆ.
ಏಕದಿನ ಕ್ರಿಕೆಟ್ ಗೆ ವಿದಾಯ ಹೇಳುವುದು ತುಂಬಾ ಸುಲಭದ ಸಂಗತಿ ಆಗಿಲ್ಲ. ಆದರೆ ಈ ಮಾದರಿಯಲ್ಲಿ ನಾನು ನೀಡಿರುವ ಕೊಡುಗೆ ತೃಪ್ತಿಕೊಟ್ಟಿದೆ. ನಾನು ಒಡಿಐ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನ ಕ್ರಿಕೆಟ್ ಏಳಿಗೆಗೆ ಬೆಂಬಲಿಸಿದ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ನಾನು ಅವರಿಂದ ಸಾಕಷ್ಟು ಬೆಂಬಲ ಹಾಗೂ ಪ್ರೇಮವನ್ನು ಪಡೆದಿದ್ದೇನೆ,” ಎಂದು ಯುವ ವೇಗಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.