ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ತನಗೆ ಮನೆಯಿಂದ ಊಟ, ಹಾಸಿಗೆ, ದಿಂಬು, ಪುಸ್ತಕ ನೀಡುವಂತೆ ಹೈಕೋರ್ಟ್ನಲ್ಲಿ ಮನವಿ ಮಾಡಿಕೊಂಡಿದ್ದರು. ಇದರ ವಿಚಾರಣೆಯು ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ನಡೆಯಿತು.
ದರ್ಶನ್ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಾಡಿದ್ದಾರೆ. ‘ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್ಗೆ ಮನೆ ಊಟದ ಅವಕಾಶ ನೀಡಿಲ್ಲ’ ಎಂದು ವಾದ ಮಾಡಿದ್ದಾರೆ. ಈ ವಾದದ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರು, ‘ಮನೆಯಿಂದ ಊಟ, ಹಾಸಿಗೆ, ಪುಸ್ತಕ ಪಡೆಯಲು ಕೋರಿದ್ದೀರಿ. ಈ ಬಗ್ಗೆ ಈ ಹಿಂದಿನ ಕೋರ್ಟ್ ತೀರ್ಪುಗಳಿವೆಯೇ? ಜೈಲು ಕೈಪಿಡಿಯಲ್ಲಿ ಮನೆ ಊಟದ ಬಗ್ಗೆ ನಿಯಮವಿದೆಯೇ? ಜೈಲು ಅಧಿಕಾರಿಗಳಿಗೆ ನೀವು ಮನವಿ ಮಾಡಿದ್ದೀರಿ. ವಿಚಾರಣಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸದೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬಹುದೇ? ಕೈದಿಗಳಿಗಿರುವ ಕಾನೂನು ಈ ಬಗ್ಗೆ ಏನು ಹೇಳುತ್ತದೆ’ ಎಂದು ಪ್ರಶ್ನೆ ಮಾಡಿದ್ದಾರೆ.
ನಟ ದರ್ಶನ್ ಕೈದಿ ನಂಬರ್ ಹಾಕಿಕೊಂಡು ಯುವಕನ ಹುಚ್ಚಾಟ: ಆರೋಪಿ ಅರೆಸ್ಟ್!
ನಟ ದರ್ಶನ್ ಅವರಿಗೆ ಜೈಲೂಟ ಸೇರುತ್ತಿಲ್ಲ. ಇದರಿಂದ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತಿದೆ ಎನ್ನಲಾಗಿದೆ. ದರ್ಶನ್ ಅವರು ಜೈಲೂಟದಿಂದ ಸಾಕಷ್ಟು ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಹೈಕೋರ್ಟ್ನಲ್ಲಿ ನಟ ದರ್ಶನ್ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು.
‘ಇದನ್ನು ಬೇರೆ ಪ್ರಕರಣಗಳಂತೆ ಪರಿಗಣಿಸಲಾಗುವುದು. ಕಾನೂನಿನ ಅನುಸಾರವೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ನ್ಯಾಯಮೂರ್ತಿ ಕೃಷ್ಣಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ತನಿಖಾಧಿಕಾರಿಗಳು, ಜೈಲು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸದ್ಯ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಲಾಗಿದೆ.