ಹಾವೇರಿ: ಹಾನಗಲ್ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಹಾವೇರಿ ಜಿಲ್ಲೆಯಲ್ಲಿಂದು ಆಯೋಜನೆಗೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಹಾನಗಲ್ ಗ್ಯಾಂಗರೇಪ್ ಪ್ರಕರಣದ ಸಂತ್ರಸ್ತೆಯನ್ನೂ ಭೇಟಿ ಮಾಡಿ ಸಮಸ್ಯೆಗಳನ್ನ ಆಲಿಸಿದರು. ಪೊಲೀಸರಿಂದ ತನಿಖೆ ಬೆಳವಣಿಗೆ ಮಾಹಿತಿ ಪಡೆದರು. ಇದೇ ವೇಳೆ ಸಂತ್ರಸ್ತೆಯ ಸಂಬಂಧಿಕರನ್ನು ಭೇಟಿಯಾಗಿ ಮನವಿ ಸ್ವೀಕರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗ ಳನ್ನೂ ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ, ಯಾರನ್ನೂ ಕಾನೂನು ಕೈಗೆ ತೆಗೆದುಕೊಳ್ಳೋದಕ್ಕೆ ಬಿಡೋದಿಲ್ಲ. ಯಾವುದೇ ಧರ್ಮಕ್ಕೆ ಸೇರಿದವರಾಗಲಿ ಜಾತಿಗೆ ಸೇರಿದವರಾಗಿದ್ದರೂ ಕ್ರಮ ಗ್ಯಾರಂಟಿ. ಈ ಕೇಸ್ನಲ್ಲಿ ಯಾರೇ ಕಾನೂನು ಕೈಗೆ ತೆಗೆದುಕೊಂಡಿದ್ದರೂ ಶಿಕ್ಷೆ ಕೊಡಿಸ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.