ಬೆಂಗಳೂರು:- ಅತ್ಯಾಚಾರಕ್ಕೆ ಒಳಾಗದ ಸಂತ್ರಸ್ತೆಯನ್ನೇ ಮದುವೆಯಾದ ಆರೋಪಿಯ ಕೇಸ್ ಅನ್ನು ಹೈಕೋರ್ಟ್ ರದ್ದು ಮಾಡಿದೆ. ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ಈ ಆದೇಶ ಮಾಡಿದೆ.
ಅತ್ಯಾಚಾರ ಘಟನೆ ನಡೆದಾಗ ಸಂತ್ರಸ್ತೆಯು ಅಪ್ರಾಪ್ತೆಯಾಗಿದ್ದರು. ಸಂತ್ರಸ್ತೆ ಲೈಂಗಿಕ ಸಂಭೋಗಕ್ಕೆ ಗುರಿಯಾಗಿದ್ದಾಳೆ ಎಂಬುದಾಗಿ ವೈದ್ಯಕೀಯ ದಾಖಲೆಗಳು ಬಹಿರಂಗಪಡಿಸುತ್ತವೆ. ಇದೀಗ ವಿಚಾರಣೆಗೆ ಹಾಜರಾಗಿರುವ ಸಂತ್ರಸ್ತೆ, ಆರೋಪಿಯನ್ನು ಮದುವೆಯಾಗುವುದಾಗಿ ದೃಢೀಕರಿಸಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ ಆರೋಪಿ ಸಹ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಅಲ್ಲದೆ, ವಿಚಾರಣಾ ನ್ಯಾಯಾಲಯದ ವಿಚಾರಣೆ ವೇಳೆ ಪ್ರಕರಣದ ಸಾಕ್ಷಿಯಾಗಿರುವ ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯ ನುಡಿದ್ದಾರೆ. ಪ್ರಾಸಿಕ್ಯೂಷನ್ನ್ನು ಬೆಂಬಲಿಸುವ ಯಾವೊಂದು ಸಾಕ್ಷ್ಯವನ್ನೂ ಪಾಟಿ ಸವಾಲಿನಲ್ಲಿ ಸಂತ್ರಸ್ತೆ ದಾಖಲಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರೋಪಿ ವಿರುದ್ಧದ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆ ಮುಂದುವರಿದರೆ, ಆತ ಸೆರೆಮನೆ ವಾಸದಲ್ಲಿ ಮುಂದುವರಿಯಲಿದ್ದು, ಹೆಚ್ಚಿನ ಸಂಕಟ ಅನುಭವಿಸುತ್ತಾನೆ. ಜೊತೆಗೆ, ಸಂತ್ರಸ್ತೆಗೆ ನ್ಯಾಯ ಸಿಗುವುದಕ್ಕಿಂತ ಹೆಚ್ಚಿನ ದುಃಖ ಒದಗುತ್ತದೆ. ನ್ಯಾಯದಾನದೊಂದಿಗೆ ಪ್ರಕರಣ ಅಂತ್ಯವಾಗುವುದಿಲ್ಲ. ಬದಲಿಗೆ ಕಾನೂನಿನ ಪ್ರಕ್ರಿಯೆ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಆರೋಪಿ ಮೇಲಿನ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ ರದ್ದುಪಡಿಸಿದೆ.